ಚಿತ್ರಕಲಾ ಪ್ರದರ್ಶನ; ಲಲಿತ ಕಲೆಯಲ್ಲಿ ಸಾಧನೆ
ಸಿಂಧನೂರು: ತುಮಕೂರಿನ ಕರ್ನಾಟಕ ಆರ್ಟ್ ಸೊಸೈಟಿ(ರಿ) ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಚಿತ್ರಕಲಾ ಪ್ರದರ್ಶನಕ್ಕೆ ವಿದ್ಯಾರ್ಥಿಗಳ ವಿಭಾಗದಿಂದ ನಗರದ ನೂತನ ಲಲಿತಕಲಾ ಮಹಾವಿದ್ಯಾಲಯದ 8 ವಿದ್ಯಾರ್ಥಿಗಳ 9 ಕಲಾಕೃತಿಗಳು ಆಯ್ಕೆಯಾಗಿವೆ. ಕು. ಸ್ವಾತಿ ಪಾಪಯ್ಯ ಶೆಟ್ಟಿ ಇವರ 'ಬದುಕಿನ ದಾರಿ' ಈ ರೇಖಾಚಿತ್ರ ಕಲಾಕೃತಿ ರಾಜ್ಯ ಮಟ್ಟದ ವಿದ್ಯಾರ್ಥಿಗಳ ವಿಭಾಗದಲ್ಲಿ ಮೆರಿಟ್ ಸರ್ಟಿಫಿಕೇಟ್ ಅವಾರ್ಡ್ಗೆ ಭಾಜನವಾಗಿದೆ. 3ನೇ ವರ್ಷದ ವಿದ್ಯಾರ್ಥಿನಿ ಸ್ವಾತಿ ರಚಿಸಿದ ಹಳೇಬೇರು ಹೊಸ ಚಿಗುರು, ಅನುರಾಧಾ (ತ್ರಿಭುಜಾಕೃತಿ ಗಣೇಶ), ಹೇಮಾ(ಹೆಜ್ಜೆ ಗುರುತು), ಮಾಲಾನಬೀ(ಶೀರ್ಷಿಕೆ ರಹಿತ), ನಜ್ಮಾಲೇ ಹುಸೇನ್(ತಾಳ್ಮೆ), ರಹೇಮಾನಬೀ(ಶೀರ್ಷಿಕೆ ರಹಿತ), ವಿರೂಪಾಕ್ಷಿ(ಹಿಡಿತ), 5ನೇ ವರ್ಷದ ರಮೇಶ(ಶೀರ್ಷಿಕೆ ರಹಿತ) ಕಲಾಕೃತಿಗಳು ಸಹ ಆಯ್ಕೆಯಾಗಿವೆ. ಇದೇ ತಿಂಗಳು ಜರುಗಲಿರುವ ಸಮಾರೋಪ ಸಮಾರಂಭದಲ್ಲಿ ಆಯ್ಕೆಯಾಗಿರುವವರಿಗೆ ಪ್ರಶಸ್ತಿ ಪತ್ರ, ಪುರಸ್ಕಾರ ಪ್ರದಾನ ಮಾಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.