ಬಿತ್ತನೆ ಬೀಜ ಮಾರಾಟ ಕಂಪನಿ ವಂಚನೆ; ಆರೋಪ
ಸಿಂಧನೂರು: ಹೈದ್ರಾಬಾದ್ ಮೂಲದ ವಿಶಾಲ್ ಸೀಡ್ಸ್ ಕಂಪನಿಯ ವಿಜೆಎಸ್ 234 ತಳಿಯ ಹೈಬ್ರಿಡ್ ಜೋಳದ ಬೆಳೆ ಚಿಕ್ಕ ತೆನೆಯಾಗಿರುವುದಲ್ಲದೆ ಕಾಳು ಕಟ್ಟದಿರುವುದಕ್ಕೆ ರೈತರು ತೀವ್ರ ಆತಂಕ ಎದುರಿಸುತ್ತಿದ್ದಾರೆ. ತಾಲೂಕಿನ ಸುಕಾಲಪೇಟೆ, ಬೆಳಗರ್ಕಿ, ಗೋಮರ್ಸಿ, ಉದ್ಭಾಳ ಮತ್ತಿತರೆಡೆಯ ರೈತರು ಈ ತಳಿಯ ಬಿಳಿ ಜೋಳದ ಬೀಜ ಬಿತ್ತಿದ್ದು ಬೆಳೆ ಪ್ರತಿ ವರ್ಷದಂತೆ ಎತ್ತರವಾಗಿ ಬೆಳೆದಿದೆ. ಆದರೆ ತೆನೆಯ ಪ್ರಮಾಣ ಅತ್ಯಂತ ಚಿಕ್ಕದಾಗಿವೆ. ಅಲ್ಲದೆ ಕಾಳು ಕಟ್ಟಿಲ್ಲ ಎಂದು ರೈತರಾದ ಏಳುಕುರಿ ಮಲ್ಲಪ್ಪ, ಈರಪ್ಪ ಪೂಜಾರ, ರಮೇಶ ಭಂಗಿ, ಸೋಮನಾಥ ಪತ್ತಾರ, ಯಂಕಪ್ಪ ಬಡಗಿ, ಅಮರೇಶಪ್ಪ ದಢೇಸುಗೂರು ಆರೋಪಿಸಿದ್ದಾರೆ. 15 ವರ್ಷಗಳಿಂದ ಇದೇ ಕಂಪನಿಯ ವಿಜೆಎಸ್ 234 ತಳಿ ಹೈಬ್ರಿಡ್ ಜೋಳ ಬಿತ್ತಲಾಗುತ್ತಿದ್ದು, ಈ ಬಾರಿ ರೈತರಿಗೆ ವಂಚಿಸಲಾಗಿದೆ ಎಂದು ಆರೋಪಿಸಿದರು. ಈಗಾಗಲೇ ಕೃವಿವಿಗೆ ಬೆಳೆ ಇಳುವರಿ ಬಗ್ಗೆ ಇರುವ ದೋಷ ಕಂಡು ಹಿಡಿಯಲು ಶಿಫಾರಸ್ಸು ಕಳುಹಿಸಿದ್ದು 3 ದಿನದೊಳಗೆ ಜಮೀನಿಗೆ ಆಗಮಿಸಿ ವರದಿ ನೀಡಲಿದ್ದಾರೆ. ನಂತರ ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಜಯಪ್ರಕಾಶ ತಿಳಿಸಿದ್ದಾರೆ.