ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಕ್ಕಳಿಗೆ ಮನೆಯಲ್ಲಿ ಮಹಿಳೆಯರನ್ನು ಗೌರವಿಸುವ ನೀತಿಪಾಠ ಹೇಳಿಕೊಡಿ

Rashmi Kasaragodu
Updated On : 5 Jan 2014, 1:51 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜ.4
ಮಹಿಳೆಯರಿಗೆ ಗೌರವಿಸುವ ನೀತಿಪಾಠವನ್ನು ಗಂಡುಮಕ್ಕಳಿಗೆ ಮನೆಯಲ್ಲಿ ಪಾಲಕರು, ಪೋಷಕರು ಹೇಳಬೇಕು. ಮಕ್ಕಳಿದ್ದಾಗಲೇ ಮಹಿಳೆಯರ ಪ್ರತಿ ಗೌರವ ಭಾವನೆ ಗಂಡುಮಕ್ಕಳಲ್ಲಿ ಚಿಗುರೊಡದರೆ ಅದು ತನ್ನದೇ ಆದಂತಹ ಸುಪರಿಣಾಮಕ್ಕೆ ಕಾರಣವಾಗುತ್ತದೆ, ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣವೂ ಬೀಳುತ್ತದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತೆ ಮೀರಾ ಪಂಡಿತ ಹೇಳಿದ್ದಾರೆ.
ನಗರದ ಕೋಠಾರಿ ಭವನದಲ್ಲಿ ನಡೆದ ಶಕ್ತಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಗಂಡು ಮಕ್ಕಳ ಮೇಲಿನ ವ್ಯಾಮೋಹದಿಂದ ಪಾಲಕರು- ಪೋಷಕರು ಅವರಿಗೆ ಮುಕ್ತ ವಾತಾವರಣ ಕಲ್ಪಿಸುತ್ತಾರೆ. ಇಂತಹ ಪ್ರವೃತ್ತಿ ಹೆಚ್ಚುತ್ತಿರುವುದರಿಂದಲೇ ಸಮಾಜದಲ್ಲಿ ಗಂಡುಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಮಾನವೀಯತೆ, ಮಹಿಳೆಯರ ಪ್ರತಿ ಗೌರವ ಭಾವನೆ, ಹಿರಿಯರಿಗೆ ಗೌರವಿಸುವುದನ್ನೆಲ್ಲ ಮರೆತು ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮನೆಯಲ್ಲೇ ಕಲಿಸಬೇಕು: ಶಾಲೆಗಳಿಗೆ ಲಕ್ಷಾಂತರ ರುಪಾಯಿ ತೆತ್ತು ಗಂಡು ಮಕ್ಕಳನ್ನು ಓದಿಸಲಾಗುತ್ತಿದೆ. ಹಣವನ್ನೇ ಕೊಟ್ಟಿದ್ದೇವೆ, ಶಾಲೆಯಲ್ಲಿಯೇ ಎಲ್ಲವನ್ನೂ ಕಲಿಸುತ್ತಾರೆ ಎಂದು ಮನೆಯಲ್ಲಿ ಮಕ್ಕಳನ್ನು ಸಲುಗೆಯಿಂದ ಇರಲು ಬಿಡುವುದು ಸರಿಯಾದ ಕ್ರಮವಲ್ಲ. ಶಾಲೆಗಿಂತ ಮನೆಯಲ್ಲಿ ಮಕ್ಕಳಿಗೆ, ಅದರಲ್ಲಿಯೂ ಗಂಡು ಮಕ್ಕಳಿಗೆ ಸ್ತ್ರೀಯರ ಬಗ್ಗೆ ನಡವಳಿಕೆ ಹೇಗೆ ಬೆಳೆಸಿಕೊಳ್ಳಬೇಕು ಎಂಬುದರ ಪಾಠ ದೊರಕಿದಲ್ಲಿ ಅಂತಹ ಮಗು ಬೆಳೆದು ಸಮಾಜದಲ್ಲಿ ಸಂಭಾವ್ಯ ವ್ಯಕ್ತಿಯಾಗುವನು. ತನ್ನ ಪರಿಸರದಲ್ಲಿ ಮಹಿಳೆಯರು, ಮಕ್ಕಳು, ಹಿರಿಯರೊಂದಿಗೆ ವಿಧೇಯತೆಯಿಂದ, ಮಾನವೀಯತೆಯಿಂದ ನಡೆದುಕೊಳ್ಳುತ್ತಾನೆ ಎಂದು ಉದಾಹರಣೆ ಸಮೇತ ವಿವರಣೆ ನೀಡಿದರು.
ಶಿಕ್ಷಣದಲ್ಲಿ ನೀತಿಪಾಠ ಮರೆಯಾಗುತ್ತಿರುವುದರ ಬಗ್ಗೆ ಕಳವಳ ಹೊರಹಾಕಿದ ಮೀರಾ, ಬರುವ ದಿನಗಳಲ್ಲಿ ಪಾಲಕರು ಇಂತಹ ಕೊರತೆಗಳನ್ನು ತುಂಬಲು ತಮ್ಮ ಇತಿಮಿತಿಯಲ್ಲಿ ಕಳಕಳಿಯಿಂದ ಕೆಲಸ ಮಾಡಬೇಕು ಎಂದರು.
ಮಹಿಳೆ ಶಕ್ತಿ ಸ್ವರೂಪಿಣಿ: ಮಹಿಳೆಯರನ್ನು ಸಮಗ್ರ ದೃಷ್ಟಿಕೋನದಿಂದ ಗೌರವ ಭಾವದಿಂದ ಕಾಣಬೇಕು ಎಂಬುದು ವಿವೇಕರ ನುಡಿಯಾಗಿತ್ತು ಎಂದು ಹೇಳಿದವರು ರಾಷ್ಟ್ರ ಸೇವಿಕಾ ಸಮಿತಿಯ ಉತ್ತರ ಪ್ರಾಂತ ಕಾರ್ಯವಾಹಿಕಾ ವೇದಾ ಕುಲ್ಕರ್ಣಿ ಧಾರವಾಡ. ವಿವೇಕರ ದೃಷ್ಟಿಕೋನದಲ್ಲಿ ಮಹಿಳೆ ವಿಷಯವಾಗಿ ಶಕ್ತಿ ಸಮ್ಮೇಳನದಲ್ಲಿ ಉಪನ್ಯಾಸ ನೀಡಿದ ಅವರು ಸೃಷ್ಟಿಗೆ ಕಾರಣೀಭೂತಳಾಗುವ ಮಹಿಳೆ ತಾಳ್ಮೆಯ ಪ್ರತೀಕ ಎಂದರು.
ಚಿಲ್ಲರೆ ಕಾರಣಗಳಿಗಾಗಿ ವಿಚ್ಚೇದನಗಳು ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಬಗ್ಗೆ ಕಳವಳ ಹೊರಹಾಕಿದ ವೇದಾ, ಮಹಿಳೆಯರು ಸಮಾಜ ಮೇಲೆ ಪ್ರೀತಿ ಹೊಂದಿದವರಾಗಿರಬೇಕು. ಜೊತೆಗೇ ತಾಳ್ಮೆಯ ಗುಣ ಬೆಳೆಸಿಕೊಂಡಲ್ಲಿ ಯಶಸ್ವಿಯಾಗಿ ಸಾಧನೆಯ ಬದುಕು ಕಟ್ಟಬಲ್ಲಳು ಎಂದರು.
ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖರು, ಸಂವರ್ಧಿನಿ ಜಿಲ್ಲಾ ಆಯಾಮದ ಸಂಯೋಜಕಿ ವಾಸುಕಿ ಹೆರೂರ್, ಸ್ವಾಮಿ ವಿವೇಕಾನಂದ ಸಮೀತಿಯ ಲಿಂಗರಾಜಪ್ಪ ಅಪ್ಪ ಸೇರಿದಂತೆ ಪ್ರಮುಖರು ಅನೇಕರು ವೇದಿಕೆಯಲ್ಲಿದ್ದರು.
ಇಡೀ ದಿನ ಶಕ್ತಿ ಸಮ್ಮೇಳನದಲ್ಲಿ ಮಹಿಳೆಯರ ಬದುಕಿನ ಹತ್ತು ಹಲವು ಆಯಾಮಗಳ ಬಗ್ಗೆ ವಿಸ್ತೃತ ಚರ್ಚೆಗಳು, ಚಿಂತನ- ಮಂಥನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement