ಮಟ್ಕಾ ನಿಯಂತ್ರಣಕ್ಕೆ ಪೊಲೀಸ್ ಕಾರ್ಯಾಚರಣೆ
ರಾಯಚೂರು: ಜಿಲ್ಲೆಯಲ್ಲಿ ಮಟಕಾ ಮತ್ತು ಇಸ್ಪೀಟ್ ಜೂಜುಕೋರರ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಕಾರ್ಯಾಚರಣೆ ಮುಂದುವರಿಸಿದ್ದು, ಡಿಸೆಂಬರ್ ತಿಂಗಳೊಂದರಲ್ಲಿಯೇ 60 ಮಟಕಾ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ. ಜಿಲ್ಲೆಯ ವಿವಿಧೆಡೆ ದಾಖಲಾದ 60 ಮಟಕಾ ಜೂಜಾಟದ ಪ್ರಕರಣಗಳಲ್ಲಿ 90 ಜನ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 1,13,271 ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಅದೇ ರೀತಿ ಇಸ್ಪೀಟ್ ಆಡುತ್ತಿದ್ದ 142 ಆರೋಪಿಗಳನ್ನು ಬಂಧಿಸಿ 23 ಪ್ರಕರಣ ದಾಖಲಿಸಲಾಗಿದೆ. ಇಸ್ಪೀಟ್ ಜೂಜಿಗೆ ಸಂಬಂಧಿಸಿ 3,00,015 ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ. ಜಿಲ್ಲೆಯಲ್ಲಿ ಮಟಕಾ ಮತ್ತು ಇಸ್ಪೀಟ್ ಜೂಜು ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಜಿಲ್ಲೆಯ ವಿವಿಧೆಡೆ ಒಟ್ಟು ಮೂರು ವಿಶೇಷ ತಂಡಗಳನ್ನು ರಚಿಸಿದೆ. ಮಟಕಾ ಮತ್ತು ಇಸ್ಪೀಟ್ ಆಡುವ ಬಗ್ಗೆ ಸಾರ್ವಜನಿಕರೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.