ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೆಬಿಜೆಎನ್‌ಎಲ್ ಹಗರಣ ಸಿಒಡಿ ತನಿಖೆಗೆ ವಹಿಸಲು ದಸಂಸ ಆಗ್ರಹ

Lingaraj Badiger
Updated On : 6 Jan 2014, 11:08 am

ಕ.ಪ್ರ. ವಾರ್ತೆ, ಲಿಂಗಸ್ಗೂರು, ಜ.5
ಕೃಷ್ಣಾ ಭಾಗ್ಯ ಜಲನಿಗಮದ ನಾರಾಯಣಪುರ ಜಲಾಶಯ, ಬಲದಂಡೆ ನಾಲೆ, ರಾಂಪೂರ ಏತನೀರಾವರಿ ಯೋಜನೆಗಳ ಮೇಲುಸ್ತುವಾರ ಮತ್ತು ನಿರ್ವಹಣೆ ಹೆಸರಿನಲ್ಲಿ ನಡೆದ ಅವ್ಯವಹಾರ ಸಿಒಡಿ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಸಚಿವ ಡಾ. ಶರಣಪ್ರಕಾಶ ಪಾಟೀಲರಿಗೆ ಮನವಿ ಸಲ್ಲಿಸಿದರು.
ಕೆಬಿಜೆಎನ್‌ಎಲ್‌ನಿಂದ ಟೆಂಡರ್ ಕರೆದಾಗ ಟೆಂಡರ್ ಹಾಕಿದವರ ಹೆಸರುಗಳನ್ನು ಪ್ರಕಟಿಸದೆ ಪ್ರಭಾವಿಗಳ ಹಾಗೂ ಮಧ್ಯವರ್ತಿಗಳ ದಬ್ಬಾಳಿಕೆಯಿಂದ ಟೆಂಡರುದಾರರನ್ನು ದಿಕ್ಕುತಪ್ಪಿಸಿ ತಮಗೆ ಬೇಕಾದ ಗುತ್ತಿಗೆದಾರರಿಗೆ ಹೆಚ್ಚುವರಿ ಮೊತ್ತದಲ್ಲಿ ಕಾಮಗಾರಿ ಗುತ್ತಿಗೆ ನೀಡಿ ಕೋಟ್ಯಾಂತರ ರೂ. ಭ್ರಷ್ಟಾಚಾರ ನಡೆಸಲಾಗಿದೆ. ಇದರಿಂದ ಜಲಾಶಯದ ಕ್ರಷ್ಟಗೇಟ್‌ಗಳ ಸೋರಿಕೆ ಮುಂದುವರಿದಿದೆ. ಜಲಾಶಯದ ಕಲ್ಲುಗೋಡೆಗಳಲ್ಲಿ ನಿರಾತಂಕವಾಗಿ ಬಿಸಿನೀರು ಹೊರಬರುತ್ತಿದೆ.
ಭ್ರಷ್ಟಾಚಾರಕ್ಕೆ ಸಾಕ್ಷಿ: ನಾರಾಯಣಪುರ ಬಲದಂಡೆ ನಾಲೆ ನಿರ್ಮಾಣ ಹಾಗೂ ಮೇಲುಸ್ತುವಾರಿಯಲ್ಲಿ ಕೂಡ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಸರ್ಕಾರದ ಹಣ ಸಾಕಷ್ಟು ಖರ್ಚಾಗಿದ್ದರೂ 0 ಕಿಮೀ ನಿಂದ 95 ಕಿಮೀ ವರೆಗೆ ಕಿತ್ತುಹೋಗಿದೆ. ಮುಖ್ಯ ನಾಲೆಯ ವೀಕ್ಷಣಾ ರಸ್ತೆಗಳು ಮುಚ್ಚಿಹೋಗಿ ನಾಲೆ ನಿರ್ವಹಣೆ ವೀಕ್ಷಣೆ ಅಸಾಧ್ಯವಾಗಿದೆ. ನಿರ್ಮಾಣಗೊಂಡ 8-10 ವರ್ಷದಲ್ಲಿ ನಾಲೆ ಸಂಪೂರ್ಣ ಹಾಳಾಗಿರುವುದು ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ.
ಇಲಾಖೆ ಅವ್ಯವಹಾರ: ರಾಂಪೂರ್ ಏತನೀರಾವರಿ ಯೋಜನೆಯಡಿ ಜಾಕ್‌ವೆಲ್ ಹಾಗೂ ಕಾಲುವೆಗಳ ನಿರ್ಮಾಣದಲ್ಲಿ ಗುತ್ತಿಗೆದಾರರಿಗೆ ಆದ ಟೆಂಡರ್ ಹಣಕ್ಕಿಂತ ದುಪ್ಪಟ್ಟು ಹಣ ಪಾವತಿಸುವ ಮೂಲಕ ಕೆಬಿಜೆಎನ್‌ಎಲ್ ಅಧಿಕಾರಿಗಳು ಕೆಲ ಪಟ್ಟಭದ್ರ ಹಿತಾಸಕ್ತಿಗಳಿಗೆ ಸರ್ಕಾರದ ಹಣ ತುಂಬುತ್ತಿದ್ದಾರೆ. ಇತ್ತೀಚೆಗೆ ರಾಂಪೂರ ಏತನೀರಾವರಿ ಯೋಜನೆಯಲ್ಲಿ 2013ರ ಡಿಸೆಂಬರ್ 10 ರಂದು ಕರೆದ ಟೆಂಡರ್‌ನಲ್ಲಿ ಅಧಿಕಾರಿಗಳು ಮತ್ತು ಪ್ರಭಾವಿಗಳು ಭ್ರಷ್ಟಾಚಾರಕ್ಕೆ ಮಣೆ ಹಾಕುತ್ತಿರುವ ಬಗ್ಗೆ ಶಾಸಕ ಪ್ರತಾಪಗೌಡ ಪಾಟೀಲರು ಬರೆದ ಪತ್ರ ಇಲಾಖೆ ಅವ್ಯವಹಾರ ಸಾಕ್ಷೀಕರಿಸಿದೆ.
ಕಾರಣ ಕಳೆದ 5-6 ವರ್ಷದಿಂದ ಕೆಬಿಜೆಎನ್‌ಎಲ್ ವ್ಯಾಪ್ತಿಯ ನಾರಾಯಣಪುರ ಬಲದಂಡೆ, ರಾಂಪೂರ ಏತನೀರಾವರಿ ಯೋಜನೆಗಳಲ್ಲಿ ಕರೆದಿರುವ ಟೆಂಡರ್‌ಗಳ ನೋಟಿಫಿಕೇಷನ್ ಟೆಕ್ನಿಕಲ್ ಬಿಡ್ ಮತ್ತು ಫೈನಾನ್ಸಿಯಲ್ ಬಿಡ್ ಹಾಗೂ ಗುತ್ತಿಗೆದಾರರ ಪಟ್ಟಿಗಳಲ್ಲಿ ನಡೆದ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಲು ಸಿಒಡಿ ತನಿಖೆ ಒಪ್ಪಿಸಬೇಕು. ಇಲ್ಲದಿದ್ದರೆ ಹೋರಾಟ ರೂಪಿಸಲಾಗುವುದೆಂದು ದಸಂದ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ, ಮುಖಂಡರಾದ ಮಾನಪ್ಪ ಪೂಜಾರಿ, ಯಂಕಪ್ಪ ಚಿತ್ತಾಪುರ, ಕೆಂಚಪ್ಪ ಆನಾಹೊಸೂರು, ಚನ್ನಬಸವ ಕುಣಿಕೆಲ್ಲೂರ, ನಾಗರಾಜ ಹಾಲಬಾವಿ, ಸೋಮಣ್ಣ ಬಚ್ಯಾಳ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ತುಂಗಭದ್ರಾ ಎಡದಂಡೆ: ಸಮರ್ಪಕ ನೀರಿಗೆ ಒತ್ತಾಯ
ಮಸ್ಕಿ: ತುಂಗಭದ್ರಾ ಎಡದಂಡೆ ಕಾಲುವೆಯ 55ನೇ ಉಪಕಾಲುವೆಯ ಕೆಳಭಾಗದ ರೈತರಿಗೆ ಬೇಸಿಗೆಯ ಬೆಳೆಗೆ ವಾರಾಬಂದಿ ಪ್ರಕಾರ ನೀರು ಹರಿಸದಿರುವ ಕ್ರಮವನ್ನು ಖಂಡಿಸಿರುವ ರಾಜ್ಯ ರೈತಸಂಘ(ಕೋಡಿಹಳ್ಳಿ ಬಣ), ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ರೈತರನ್ನು ವಂಚಿಸುತ್ತಿದ್ದಾರೆಂದು ಆರೋಪಿಸಿದೆ.
ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಭಾನುವಾರ ಈ ವಿಷಯ ತಿಳಿಸಿದ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಿಗಿ ಮಾತನಾಡಿ, ಗೌಡನಭಾವಿಯಿಂದ ಕಾಲುವೆಯ ಮೇಲ್ಭಾಗದಲ್ಲಿ ಅನಧಿಕೃತ ಪೈಪುಗಳನ್ನು ಹಾಕಿ ನೀರನ್ನು ಕದಿಯಲು ಇಲಾಖೆಯ ಅಧಿಕಾರಿಗಳು ಅವಕಾಶ ಮಾಡಿಕೊಡುತ್ತಿದ್ದಾರೆಂದು ದೂರಿದರು.
ಕಾಲುವೆಯಿಂದ ಅಕ್ರಮವಾಗಿ ಪಂಪ್‌ಸೆಟ್ ಮೂಲಕ ನೀರೆತ್ತಿ ಬಳಕೆ ಮಾಡಲಾಗುತ್ತಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಗಳ ಗಮನಕ್ಕೆ ತಂದರೂ ಕ್ರಮ ಮಾತ್ರ ಜರುಗಿಸಿಲ್ಲ. ಮಿತ ನೀರು ಬೆಳೆಗಳಿಗೆ ನೀರೊದಗಿಸುವುದಾಗಿ ಐಸಿಸಿ ಸಭೆಯಲ್ಲಿ ಹೇಳಲಾಗಿತ್ತು. ಆದರೆ ಆ ತಿರ್ಮಾನವನ್ನು ಜಾರಿಗೊಳಿಸುವಲ್ಲಿ ಅಧಿಕಾರಿಗಳು ವಿಫರಾಗಿದ್ದಾರೆಂದು ಆರೋಪಿಸಿದರು.
ಕೂಡಲೇ ಅಕ್ರಮಕ್ಕೆ ಕಡಿವಾಣ ಹಾಕಬೇಕು. ರೈತರಿಗೆ ವಾರಾಬಂದಿಯಂತೆ ನೀರೊದಗಿಸದಿದ್ದಲ್ಲಿ ಸಿಂಧನೂರಿನಲ್ಲಿರುವ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿದರು. ರಂಗನಾಥ, ನಾಗೇಶ ಗಲಿಗಿನ, ಗಂಗಾಧರ, ಯಲ್ಲಪ್ಪ, ನಾಗರಾಜ್ ಮೇದಾರ, ದಲಿತ ಸಾಹಿತಿ ದಾನಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement