'ನಂದವಾಡಗಿ' ಶೀಘ್ರ ಚಾಲನೆಗೆ ರೈತ ಸಂಘ ಒತ್ತಾಯ
ಕ.ಪ್ರ. ವಾರ್ತೆ, ಲಿಂಗಸ್ಗೂರು, ಜ.5
ಜಿಲ್ಲೆಯ ಪ್ರಮುಖ ನಂದವಾಡಗಿ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಘೋಷಣೆ ಮಾಡಿದ್ದು, ಕೂಡಲೇ ಯೋಜನೆ ಜಾರಿಗೆ ಚಾಲನೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ರೈತರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲರಿಗೆ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ಶನಿವಾರ ರಾತ್ರಿ ಸಚಿವರು ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆ ನಂತರ ರೈತರು ಮನವಿ ಮಾಡಿ, ಲಿಂಗಸ್ಗೂರು ತಾಲೂಕಿನ 47 ಗ್ರಾಮಗಳು, ಮಾನವಿ ತಾಲೂಕಿನ 23 ಹಾಗೂ ಹುನಗುಂದ ತಾಲೂಕಿನ 5 ಸೇರಿದಂತೆ 75 ಗ್ರಾಮಗಳಿಗೆ ನೀರಾವರಿ ಕಲ್ಪಿಸುವ ಯೋಜನೆಗೆ ಹಣ ಬಿಡುಗಡೆ ಮಾಡಿ ಮೂಲ ಯೋಜನೆಯಂತೆ 14.43 ಟಿಎಂಸಿ ನೀರು ಬಳಸಿಕೊಂಡು ಕಾಮಗಾರಿ ಪ್ರಾರಂಭಿಸಿ ಜಿಲ್ಲೆಯ ರೈತರ ಹೋರಾಟದ ಕನಸು ನನಸು ಮಾಡಬೇಕೆಂದು ಆಗ್ರಹಿಸಿದರು.
ಬೇಡಿಕೆಗಳು...
1. ನಾರಾಯಣಪುರ ಬಲದಂಡೆ ಹದಗೆಟ್ಟ ಕಾಲುವೆ ವೀಕ್ಷಣೆ ಮಾಡಿ 0 ಕಿಮೀ ನಿಂದ 95 ಕಿಮೀ ವರೆಗೆ ಆಧುನೀಕರಣಗೊಳಿಸಬೇಕು.
2. ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಬೇಕು. ತಾಲೂಕಿನಲ್ಲಿ ರೇಷ್ಮೆ ಬೆಳೆಗಾರರಿಗೆ ಲಿಂಗಸ್ಗೂರಿನಿಂದ ರಾಮನಗರಕ್ಕೆ ನೇರ ಬಸ್ ಸೌಕರ್ಯ ಕಲ್ಪಿಸಬೇಕು.
3. ಸಾಮಾಜಿಕ ಭದ್ರತಾ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಪಡಿತರ ಚೀಟಿ ಪೂರೈಕೆಯಲ್ಲಿ ನಡೆದ ಅವ್ಯವಹಾರ ತಡೆಯಬೇಕು.
4. ಕೃಷಿ ಇಲಾಖೆಯಿಂದ ನೀಡುವ ದೊಡ್ಡ ರಾಶಿಯಂತ್ರಗಳನ್ನು ಬೇಡಿಕೆಗನುಸಾರ ತರಿಸಬೇಕು.
5. ತಾಲೂಕಿನಲ್ಲಿ ಪಂಪ್ಸೆಟ್ಗಳಿಗೆ ಅನುಗುಣವಾಗಿ ವಿದ್ಯುತ್ ಪೂರೈಸಬೇಕು ಹಾಗೂ ಪರಿವರ್ತಕ ಒದಗಿಸಬೇಕು. ವರ್ಕ್ಆರ್ಡರ್ ಮಾಡಿಸಿಕೊಂಡ ರೈತರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು.
6. ಅಕ್ರಮ- ಸಕ್ರಮ ಯೋಜನೆಯಡಿ ಹಣ ತುಂಬಿದ ರೈತರಿಗೆ ವಿದ್ಯುತ್ ಕಂಬ, ವಿದ್ಯುತ್ ತಂತಿ, ಪರಿವರ್ತಕ ಒದಗಿಸಿ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು.
7. ಯರಗೋಡಿ ಗ್ರಾಮದಲ್ಲಿ ಸ.ನಂ. 19ರ 25.10 ಎಕರೆ ಯಳಗುಂದಿ ಶಿವಾರದ ಸರ್ಕಾರಿ ಜಮೀನು ಹುಲಗಪ್ಪ ಯಳಗುಂದಿ ಅನಧಿಕೃತವಾಗಿ ವಶದಲ್ಲಿಟ್ಟುಕೊಂಡು ಜನ- ಜಾನುವರುಗಳು ತೆರಳಲು ಅಡ್ಡಿಪಡಿಸುತ್ತಿದ್ದು, ಕೂಡಲೇ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಮುಖಂಡರಾದ ಸಿದ್ಧಲಿಂಗೇಶ್ವರ ಪಾಟೀಲ್, ಬಸವರಾಜ ಬಡಿಗೇರ, ಸಂಗಣ್ಮ ಮುದಗಲ್, ಸಿದ್ದೇಶ ಗೌಡೂರು, ಕುಪ್ಪಣ್ಣ ಗೋನವಾಟ್ಲ, ಹನುಮಪ್ಪ ಪೂಜಾರಿ, ಅಮರಯ್ಯಸ್ವಾಮಿ ಸೇರಿದಂತೆ ಇದ್ದರು.