ಸಾಧಕರಿಗೆ ಕೃಷಿ ಋಷಿ ಪ್ರಶಸ್ತಿ ಪ್ರದಾನ
ಮುದಗಲ್: ಸಮೀಪದ ಸಂತೆಕೆಲ್ಲೂರು ಘನಮಠ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಕೊಡಲಾಗುವ ಕೃಷಿ ಋಷಿ ಪ್ರಶಸ್ತಿಯನ್ನು ಮಟ್ಟೂರು ಮಲ್ಲೇಶಗೌಡ ಪಾಟೀಲ್, ಹಿರಿಯೂರಿನ ಹರಿಯಬ್ಬೆ ಅವರಿಗೆ ನೀಡಲಾಯಿತು.
ಪ್ರಶಸ್ತಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಲ್ಲೇಶಗೌಡ ಪಾಟೀಲ್, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಹಿತ ಕಾಪಾಡಿ, ಕೃಷಿಗೆ ಹೆಚ್ಚಿನ ಸಹಕಾರ ನೀಡಬೇಕು, ವೈಜ್ಞಾನಿಕ ಯುಗದಲ್ಲಿ ಕೃಷಿ ತುಂಬಾ ಕಷ್ಟಕರವಾಗಿದೆ ಎಂದರು.
ರಾಯಚೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ಘನಮಠ ಶಿವಯೋಗಿಗಳ ಹೆಸರು ನಾಮಕರಣ ಮಾಡಬೇಕು, ನಂದವಾಡಗಿ ಏತ ನೀರಾವರಿ ಯೋಜನೆಯನ್ನು ಶೀಘ್ರವೇ ಆರಂಭಿಸಬೇಕು, ಜಿಲ್ಲೆಯನ್ನು ಸೋಲಾರ್ ವಿದ್ಯುದ್ದೀಕರಣ ಯೋಜನೆಯಡಿ ಸೇರ್ಪಡೆ ಮಾಡಿ ರೈತರ ಪಂಪ್ಸೆಟ್ಗಳಿಗೆ ಅನುಕೂಲವಾಗುವಂತೆ ಮಾಡಬೇಕು ಎಂದರು.
ಪ್ರಶಸ್ತಿ ಸಮಾರಂಭದಲ್ಲಿ ಘನಮಠೇಶ್ವರ ಮಠದ ಪೀಠಾಧಿಪತಿ ಗುರುಬಸವ ಸ್ವಾಮೀಜಿ, ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು, ಸಂಸದ ಶಿವರಾಮೇಗೌಡ, ಶಾಸಕರಾದ ಪ್ರತಾಪಗೌಡ ಪಾಟೀಲ್, ವೆಂಕಟೇಶ ನಾಯಕ ಇದ್ದರು.