ಸೌರಶಕ್ತಿ ಜಿಲ್ಲೆಯನ್ನಾಗಿ ಘೋಷಿಸುವಂತೆ ಮನವಿ
ಕ.ಪ್ರ. ವಾರ್ತೆ, ಲಿಂಗಸ್ಗೂರು, ಜ.5
ಜಿಲ್ಲೆಯನ್ನು ಸೌರಶಕ್ತಿ (ಸೋಲಾರ್) ಜಿಲ್ಲೆಯನ್ನಾಗಿ ಘೋಟಿಸುವಂತೆ ಒತ್ತಾಯಿಸಿ ಜಿಲ್ಲಾ ಸೋಲಾರ್ ಎನರ್ಜಿ ಹೋರಾಟ ಸಮಿತಿ ಪರವಾಗಿ ಬಸವಂತರಾಯ ಕುರಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಸಂತೆಕೆಲ್ಲೂರು ಘನಮಠೇಶ್ವರರ 134ನೇ ಪುಣ್ಯಸ್ಮರಣೋತ್ಸವ ಹಾಗೂ ವಾರ್ಷಿಕ ರಥೋತ್ಸವ ಸಮಾರಂಭದಲ್ಲಿ ಸಚಿವರಿಗೆ ಮನವಿ ಮಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷಾಮ ನೀಗಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು, ಗಾಳಿ ಬೀಸುವ ಪ್ರದೇಶದಲ್ಲಿ ಪವನ ವಿದ್ಯುತ್ ಶಕ್ತಿ, ನೀರಿನ ಲಭ್ಯತೆ ಆಧಾರದ ಮೇಲೆ ಜಲವಿದ್ಯುತ್ ಉತ್ಪಾದಿಸಲಾಗುತ್ತಿದೆ. ಅದರಂತೆ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದು, ರಾಯಚೂರು ಜಿಲ್ಲೆಗೆ ಸೋಲಾರ್ ಎನರ್ಜಿ ಉತ್ಪಾದನೆ ಯೋಜನೆ ನೀಡುವುದು ನ್ಯಾಯೋಚಿತವಾಗಿದೆ ಎಂದರು.
ನೀಗಿದ ವಿದ್ಯುತ್ ಸಮಸ್ಯೆ: ಸೌರಶಕ್ತಿ ಮೂಲಕ ಸಹಾಯಧನ ನೀಡಿ ಜನಸಾಮಾನ್ಯರ ನಿತ್ಯ ಬಳಕೆ ಜೊತೆಗೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅತ್ಯುಪಯುಕ್ತ ಯೋಜನೆ ನೀಡುವಲ್ಲಿ ಸರ್ಕಾರಗಳು ವಿಫಲವಾಗಿದ್ದು, ಜಿಲ್ಲೆಯಲ್ಲಿ ಥರ್ಮಲ್ ಪವರ್ ಇದ್ದರೂ ಪ್ರತಿ ವರ್ಷ ವಿದ್ಯುತ್ ಅಭಾವ ಎದುರಾಗುತ್ತದೆ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗುತ್ತದೆ. ಸೋಲಾರ್ ಯೋಜನೆಗೆ ಬಾಗಲಕೋಟೆ, ಚಿತ್ರದುರ್ಗ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಶೇ.20 ರಷ್ಟು ಮತ್ತು ಕೇಂದ್ರ ಸರ್ಕಾರ ಶೇ.30ರಷ್ಟು ಸಹಾಯಧನ ಕೊಡಲಾಗಿದೆ. ಅದರಂತೆ ಬಿಸಿಲಿನ ತಾಪಮಾನ ಹೆಚ್ಚಿರುವ ರಾಯಚೂರು ಜಿಲ್ಲೆಯನ್ನು ಸೋಲಾರ್ ಜಿಲ್ಲೆ ಎಂದು ಘೋಟಿಸಿ ರೈತರ ಪಂಪ್ಸೆಟ್, ಗೃಹ ಬಳಕೆ, ಬೀದಿದೀಪ ಮತ್ತಿತರೆ ಬಳಕೆಗೆ ಸೋಲಾರ್ ಎನರ್ಜಿ ಒದಗಿಸಲು ಸರ್ಕಾರದ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ.