ಅನಿಷ್ಟ ಪದ್ಧತಿ ತಡೆಗೆ ಸೂಕ್ತ ಕ್ರಮ: ಯೋಗೇಶ್
ಕ.ಪ್ರ. ವಾರ್ತೆ, ಲಿಂಗಸ್ಗೂರು, ಜ.6
ತಾಲೂಕಿನ ತೊಂಡಿಹಾಳ ಗ್ರಾಮದ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅನಿಷ್ಟ ಪದ್ಧತಿಗಳ ಆಚರಣೆ ಜರುಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದೆಂದು ಸಹಾಯಕ ಆಯುಕ್ತ ಟಿ. ಯೋಗೇಶ್ ಹೇಳಿದರು.
ಸ್ಥಳೀಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸೋಮವಾರ ತೊಂಡಿಹಾಳ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತೊಂಡಿಹಾಳ ಜಾತ್ರೆ ಜ.24ರಿಂದ 26ರವರೆಗೆ ಜರುಗಲಿದ್ದು, ಜಾತ್ರೆ ಸಮಯದಲ್ಲಿ ದೇವದಾಸಿ ಪದ್ಧತಿ, ಪ್ರಾಣಿ ಬಲಿ, ಹೆಣ್ಣು ಮಕ್ಕಳಿಗೆ ಮುಡಿ ಕಟ್ಟುವುದು ಸೇರಿದಂತೆ ಅನಿಷ್ಟ ಪದ್ಧತಿಗಳ ಆಚರಣೆ ನಡೆಯದಂತೆ ತಾಲೂಕು ಆಡಳಿತ ಮೂರು ದಿನಗಳ ಕಾಲ ಜಾತ್ರೆಯಲ್ಲಿ ವಾಸ್ತವ್ಯ ಹೂಡಿ ನಿಗಾ ವಹಿಸಲಾಗುವುದು. ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳ 5 ತಂಡ ರಚನೆ ಮಾಡಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಪಂ ಪಿಡಿಒಗಳು ಸಹಾಯಕರಾಗಿರುತ್ತಾರೆ.
ನಾಗರಹಾಳ ಮತ್ತು ಹಲ್ಕಾವಟಗಿ ಕ್ರಾಸ್ಗಳಲ್ಲಿ ಜಾತ್ರೆಗೆ ಆಗಮಿಸುವ ಜನರ ತಪಾಸಣೆ ನಡೆಸಲು ಚೆಕ್ಪೋಸ್ಟ್ ಸ್ಥಾಪಿಸಲಾಗುವುದು. ಅಗತ್ಯ ವ್ಯವಸ್ಥೆ ಕೈಗೊಳ್ಳುವಂತೆ ನಾಗರಹಾಳ ಪಿಡಿಒಗೆ ಸೂಚಿಸಲಾಯಿತು. ಜಾತ್ರೆ ಸಮಯದಲ್ಲಿ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಲಾಗುವುದು. ಸುತ್ತಮುತ್ತಲ ಪ್ರದೇಶಗಳಿಂದ ಮದ್ಯ ಸರಬರಾಜು ಆಗದಂತೆ ನಿಗಾವಹಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಾತ್ರೆ ಸಮಯದಲ್ಲಿ ಅನಿಷ್ಟ ಪದ್ಧತಿ ಆಚರಣೆ ಕಂಡು ಬಂದರೆ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಅನಿಷ್ಟ ಪದ್ಧತಿ ಆಚರಿಸದಂತೆ ಜಾಗೃತಿ ಮೂಡಿಸಲು ಜ.17ರಂದು ಸಭೆ ನಡೆಸುವ ಜೊತೆಗೆ ಬೀದಿ ನಾಟಕ ಪ್ರದರ್ಶನ ಏರ್ಪಡಿಸುವಂತೆ ಸಿಡಿಪಿಒ ಪ್ರಭಾಕರ್ ಅವರಿಗೆ ಸೂಚಿಸಿದರು.
ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಮೂಲ ಸೌಕರ್ಯ, ಆರೋಗ್ಯ, ಪೊಲೀಸ್ ಭದ್ರತೆ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಜಿ.ಎಸ್. ಮಹಾಜನ್, ಮಸ್ಕಿ ಸಿಪಿಐ ಸತ್ಯನಾರಾಯಣ, ಸಿಡಿಪಿಒ ಪ್ರಭಾಕರ ಸೇರಿದಂತೆ ದಲಿತ ಸಂಘರ್ಷ ಸಮಿತಿ ಮುಖಂಡರು ಭಾಗವಹಿಸಿದ್ದರು.
--
ಪೋಸ್ಕೋ ಕಾಯಿದೆ: ಇಂದು ಕಾರ್ಯಕ್ರಮ
ರಾಯಚೂರು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪೋಸ್ಕೋ ಕಾಯಿದೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಜ.7ರಂದು ಆಯೋಜಿಸಲಾಗಿದೆ. ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗ್ಗೆ 9.30ಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಪಿ.ಜಿ.ಎಂ. ಪಾಟೀಲ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್. ಭಾನುರಾಜ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಲ್ಲಯ್ಯ, ಡಿಡಿಪಿಐ ರಾಮಾಂಜನೇಯ ಪಾಲ್ಗೊಳ್ಳಲಿದ್ದಾರೆ.