ಕೊಲೆ; ಆರೋಪಿ ಕುಟುಂಬದವರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ
ಕ.ಪ್ರ. ವಾರ್ತೆ, ರಾಯಚೂರು, ಜ.6
ನಗರದ ತಿಮ್ಮಾಪುರಪೇಟೆಯಲ್ಲಿ ಇತ್ತೀಚೆಗೆ ನಡೆದ ಗೃಹಿಣಿ ಜಮುನಾ ಎಂಬುವವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಆಕೆಯನ್ನು ಕೊಲೆ ಮಾಡಿದ ಅವಿನಾಶ ಎಂಬಾತನನ್ನು ಮಾತ್ರ ಪೊಲೀಸರು ಬಂಧಿಸಿದ್ದು, ಆತನ ಕುಟುಂಬದ ಎಲ್ಲ ಸದಸ್ಯರನ್ನೂ ಬಂಧಿಸಿ ವಿಚಾರಣೆಗೊಳಪಡಿಸುವಂತೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸಿದೆ.
ಈ ಕುರಿತು ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆಯ ತಾಲೂಕು ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, 2012ರಲ್ಲಷ್ಟೇ ಜಮುನಾಳನ್ನು ನಗರದ ತಿಮ್ಮಾಪುರ ಪೇಟೆಯ ಅವಿನಾಶ ಎಂಬಾತನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ವೇಳೆ 50 ಸಾವಿರ ನಗದು ಮತ್ತು ಚಿನ್ನಾಭರಣವನ್ನು ಅವಿನಾಶಗೆ ಜಮುನಾಳ ಪಾಲಕರು ನೀಡಿದ್ದರು ಎಂದು ತಿಳಿಸಿದರು.
ಹಣಕ್ಕಾಗಿ ಪೀಡಿಸುತ್ತಿದ್ದರು: ಮದುವೆಯಾದ ಒಂದೇ ವರ್ಷಕ್ಕೆ ಜಮುನಾಳಿಗೆ ಆಕೆಯ ಪತಿ ಅವಿನಾಶ ಮತ್ತು ಆತನ ಕುಟುಂಬದವರು ಮತ್ತಷ್ಟು ವರದಕ್ಷಿಣೆಗೆ ಬೇಡಿಕೆಯಿರಿಸಿದ್ದಾರೆ. ವರದಕ್ಷಿಣೆ ಕಿರುಕುಳ ತಾಳದೇ ಆಕೆಯು ತನ್ನ ತವರಿನಿಂದ ಮತ್ತೆ 30 ಸಾವಿರ ತಂದು ಗಂಡನ ಮನೆಯವರಿಗೆ ನೀಡಿದ್ದರೆಂದು ತಿಳಿಸಿದರು.
ಮೇಲಿಂದ ಮೇಲೆ ಪತಿಯ ಮನೆಯವರು ಹಣಕ್ಕಾಗಿ ಪೀಡಿಸಿದ್ದರಿಂದ ತವರಿನಲ್ಲಿ ಹಣಕ್ಕಾಗಿ ಜಮುನಾ ಕೇಳಿದ್ದು ಹಣವಿಲ್ಲದ್ದರಿಂದ ಆಕೆ ಬರಿಗೈಲಿ ಗಂಡನ ಮನೆಗೆ ಮರಳಿದ್ದರಿಂದ ಕೋಪಗೊಂಡ ಅವಿನಾಶ ಮತ್ತು ಆತನ ಕುಟುಂಬದವರು ಜಮುನಾಳನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಿದರು.
ನಿಷ್ಪಕ್ಷಪಾತ ತನಿಖೆ ನಡೆಸಿ: ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಕೇವಲ ಆಕೆಯ ಪತಿ ಅವಿನಾಶ ಎಂಬಾತನನ್ನು ಮಾತ್ರ ಬಂಧಿಸಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿ ಆತನ ಕುಟುಂಬದ ಎಲ್ಲ ಸದಸ್ಯರನ್ನೂ ಬಂಧಿಸಬೇಕೆಂದು ಆಗ್ರಹಿಸಿದರು.
ಹಾಗೆಯೇ ಈ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಪ್ರಭಾವ ಬೀರುವ ಕಾರ್ಯ ಆರಂಭಗೊಂಡಿದೆ. ಪೊಲೀಸ್ ಇಲಾಖೆಯು ರಾಜಕೀಯ ಪ್ರಭಾವಕ್ಕೆ ಸಿಲುಕದೇ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ದೊರೆಯುವಂತೆ ಮಾಡಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಕೆ.ಜಿ. ವೀರೇಶ್, ಫರೀದಾ ಸೇರಿದಂತೆ ಅನೇಕರಿದ್ದರು.