ಗುತ್ತಿಗೆ ಕಾರ್ಮಿಕ ಪಿಎಫ್ ಪಾವತಿಗೆ ಒತ್ತಾಯ
ಕ.ಪ್ರ. ವಾರ್ತೆ, ರಾಯಚೂರು, ಜ.6
ಜಿಲ್ಲೆಯ ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರ ಭವಿಷ್ಯ ನಿಧಿ ಪಾವತಿಸುವಂತೆ ಒತ್ತಾಯಿಸಿ ರಾಜ್ಯ ಬಿಎಸ್ಸೆನ್ನೆಲ್ ಕ್ಯಾಶುವಲ್ ಮತ್ತು ಗುತ್ತಿಗೆ ಕಾರ್ಮಿಕರ ಯೂನಿಯನ್ನ ಜಿಲ್ಲಾ ಘಟಕದಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಭವಿಷ್ಯ ನಿಧಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಹಾಯಕ ಭವಿಷ್ಯ ನಿಧಿ ಆಯುಕ್ತರಿಗೆ ಮನವಿ ಸಲ್ಲಿಸಿದ ಹೋರಾಟಗಾರರು, ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸೇರಿದ ಪಿಎಫ್ ಹಣದ ಪಾವತಿಗೆ ಸಂಬಂಧಿಸಿ ಈ ಮೊದಲು ದೂರಲಾಗಿತ್ತು. ಆಗ ಇಲಾಖೆಯಿಂದ ನೀಡಿದ ಮಾಹಿತಿಯಂತೆ ಗುತ್ತಿಗೆದಾರರ ಖಾತೆ ಸಂಖ್ಯೆ ಮತ್ತು ವಿಳಾಸವನ್ನು ಸಂಘಟನೆಗೆ ಒದಗಿಸಿದ್ದು, ಅಂಥ ಗುತ್ತಿಗೆದಾರರು ಹೊರರಾಜ್ಯದವರಾಗಿದ್ದಾರೆಂದು ಆರೋಪಿಸಿದರು.
ವರ್ಷಗಳೇ ಕಳೆದಿವೆ: ಹೊರರಾಜ್ಯ ಮತ್ತು ಹೊರಜಿಲ್ಲೆಗಳ ಗುತ್ತಿಗೆದಾರರ ಗುತ್ತಿಗೆ ಅವಧಿ ಮುಗಿದು ವರ್ಷಗಳೇ ಕಳೆದಿದ್ದು, ಅಂಥ ಗುತ್ತಿಗೆದಾರರು ಪಿಎಫ್ ಹಣ ಕಾರ್ಮಿಕರಿಗೆ ಪಾವತಿಸದಿದ್ದರೂ ಅಂಥವರಿಗೆ ಬಿಎಸ್ಸೆನ್ನೆಲ್ ಸಂಸ್ಥೆಯು ಎಲ್ಲ ಹಣ ಪಾವತಿಸಿರುವುದನ್ನು ಹೋರಾಟಗಾರರು ಖಂಡಿಸಿದರು.
ಖಾತೆಗೆ ಜಮಾ ಮಾಡಿ: ಈ ನಿಟ್ಟಿನಲ್ಲಿ ಕಾರ್ಮಿಕರಿಗಾಗಿರುವ ಅನ್ಯಾಯಕ್ಕೆ ಪ್ರತಿಯಾಗಿ ಗುತ್ತಿಗೆದಾರರಿಗೆ ಪೂರ್ಣ ಹಣ ಪಾವತಿಸಿ ಕಾರ್ಮಿಕರಿಗೆ ಪಿಎಫ್ ಹಣ ಪಾವತಿಯಾಗದಂತೆ ಮಾಡಿದ ಬಿಎಸ್ಸೆನ್ನೆಲ್ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗುತ್ತಿಗೆ ಕಾರ್ಮಿಕರ ಬಾಕಿ ಮತ್ತು ಚಾಲ್ತಿಯಲ್ಲಿರುವ ಪಿಎಫ್ ಹಣವನ್ನು ಸಂಸ್ಥೆ ನೀಡಿದ ಪಿಎಫ್ ಖಾತೆಗೆ ಜಮಾ ಮಾಡುವಂತೆ ಆಗ್ರಹಿಸಿದರು.
ಸಂಘಟನೆಯ ಗೌರವಾಧ್ಯಕ್ಷ ಶೇಕ್ಷಾಖಾದ್ರಿ, ಸಿಐಟಿಯು ಮುಖಂಡ ಡಿ.ಎಸ್. ಶರಣಬಸವ, ಗುತ್ತಿಗೆ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ವಿಠ್ಠಲ, ಗೌತಮ್, ಅಬ್ದುಲ್ ರಹೀಂ, ಜೆ. ಬಾಬು, ಶರಣಪ್ಪ, ಶಿವುಕುಮಾರ್, ವಿಠ್ಠಲ ಗಂಗಾವತಿ, ಮುಕ್ಕುಂದರಾವ್, ವೀರಭದ್ರಯ್ಯಸ್ವಾಮಿ ಇದ್ದರು.