ವಾಲ್ಮೀಕಿ ಸಮುದಾಯದ 20 ಬೇಡಿಕೆಗಳ ಪಟ್ಟಿ ಸಿದ್ಧ
ಕ.ಪ್ರ. ವಾರ್ತೆ, ರಾಯಚೂರು, ಜ.6
ಪರಿಶಿಷ್ಟ ಪಂಗಡದವರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತಾಗಲು ಪ್ರತ್ಯೇಕ ಸಚಿವಾಲಯಕ್ಕೆ ಬೇಡಿಕೆ. ಶೇ.7.5ರಷ್ಟು ವಿವಿಧ ವಿಭಾಗಗಳಲ್ಲಿ ಮೀಸಲಾತಿ ಸೇರಿದಂತೆ ವಿವಿಧ 20 ಬೇಡಿಕೆ ಈಡೇರಿಕೆಗೆ ಚಿತ್ರದುರ್ಗದಲ್ಲಿ ಜ.11ರಂದು ನಡೆಯುವ ವಾಲ್ಮೀಕಿ ನಾಯಕ ಸಮಾಜದ ಬೃಹತ್ ಸಮಾವೇಶದಲ್ಲಿ ಒತ್ತಾಯಿಸಲು ನಿರ್ಧರಿಸಲಾಗಿದೆ.
ನಗರದಲ್ಲಿ ಸೋಮವಾರ ಸಮಾಜದಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಾಜದ ಮುಖಂಡ ಬಿ.ವಿ. ನಾಯಕ, ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡದವರಿಗೆ ಶೇ.7.5ರಷ್ಟು ಮೀಸಲಾತಿ ಈಗಾಗಲೇ ನೀಡುತ್ತಿದೆ. ಆದರೆ ರಾಜ್ಯ ಸರ್ಕಾರವು ಕೇವಲ ಶೇ.3ರ ಮೀಸಲಾತಿ ನೀಡಿದ್ದು, ಅದರಿಂದ ಪರಿಶಿಷ್ಟ ಪಂಗಡದವರಿಗೆ ತಾರತಮ್ಯವಾಗಿದೆ ಎಂದು ದೂರಿದರು.
ಮನ್ನಣೆ ನೀಡದ ಸರ್ಕಾರ: ಕಳೆದ ಅನೇಕ ವರ್ಷಗಳಿಂದ ರಾಜ್ಯದಲ್ಲಿಯೂ ಕೇಂದ್ರ ಸರ್ಕಾರದ ಮಾದರಿಯಲ್ಲಿ ಶೇ.7.5ರಷ್ಟು ಮೀಸಲಾತಿ ಕಲ್ಪಿಸಲು ಪರಿಶಿಷ್ಟ ಪಂಗಡದವರು ಒತ್ತಾಯಿಸುತ್ತಿದ್ದಾರೆ. ಆದರೆ ಸರ್ಕಾರ ಮನ್ನಣೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಜ. 11ರಂದು ನಡೆಯಲಿರುವ ಸಮಾಜದ ಬೃಹತ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಒತ್ತಾಯಿಸಲಾಗುತ್ತದೆ ಎಂದರು.
ಪರಿಶಿಷ್ಟ ಪಂಗಡದವರಿಗೆ ಇದುವರೆಗೆ ಸರ್ಕಾರದಿಂದ ಪ್ರಕಟಿಸಿರುವ ವಿವಿಧ ಸೌಲಭ್ಯಗಳು ಸಮರ್ಪಕವಾಗಿ ತಲುಪಿಲ್ಲ. ಸೌಲಭ್ಯಗಳಿಗೆ ಬಿಡುಗಡೆಯಾದ ಅನುದಾನದ ದುರ್ಬಳಕೆಯಾದ ಅನೇಕ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡದವರಿಗೆ ಪ್ರತ್ಯೇತ ಸಚಿವಾಲಯ ನೀಡಬೇಕೆಂದು ಆಗ್ರಹಿಸಿದರು.
ಸಮುದಾಯದ ಮುಖಂಡರ ಆಗಮನ: ಚಿತ್ರದುರ್ಗದಲ್ಲಿ ಜ. 11ರಂದು ನಡೆಯಲಿರುವ ವಾಲ್ಮೀಕಿ ನಾಯಕ ಸಮಾಜದ ಸಮಾವೇಶವು ಪಕ್ಷಾತೀತವಾಗಿದ್ದು ಎಲ್ಲ ರಾಜಕೀಯ ಪಕ್ಷಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಬಳ್ಳಾರಿಯ ವಾಲ್ಮೀಕಿ ಸಮಾಜದ ಪ್ರಮುಖರಾದ ಶಾಸಕ ಬಿ.ಶ್ರೀರಾಮುಲು, ಸಂಸದರಾದ ಜೆ.ಶಾಂತಾ, ಸಣ್ಣ ಫಕೀರಪ್ಪ ಸೇರಿದಂತೆ ಅನೇಕರು ಸಮಾವೇಶದಲ್ಲಿ ಭಾಗವಹಿಸುವರೆಂದು ಹೇಳಿದರು.
ಸಮಾವೇಶವು ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆಯಲಿದ್ದು, ರಾಜ್ಯದ ವಿವಿಧೆಡೆಯಿಂದ ಸುಮಾರು 4ರಿಂದ 5 ಲಕ್ಷ ಜನ ವಾಲ್ಮೀಕಿ ಸಮಾಜದವರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಸಮಾವೇಶಕ್ಕೆ ಆಗಮಿಸುವವರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ತಾಲೂಕಿನಿಂದ 10 ಬಸ್ಗಳು ಚಿತ್ರದುರ್ಗಕ್ಕೆ ತೆರಳಲಿದ್ದು, ಇದು ಕಾಂಗ್ರೆಸ್ ಪಕ್ಷದ ಸಮಾವೇಶವಲ್ಲ. ಈ ಸಮಾವೇಶದಿಂದ ರಾಜಕೀಯ ಲಾಭ ಮಾಡಿಕೊಳ್ಳುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿ, ಈ ಸಮಾವೇಶದ ಮೂಲಕ ಸಮಾಜದ ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಿ: ರಾಜ್ಯದ ವಿಶ್ವವಿದ್ಯಾಲಯದಲ್ಲಿ ಸದ್ಯ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಲಾಗಿದೆ. ಆದರೆ ವಿವಿಗೆ ವಾಲ್ಮೀಕಿ ಅವರ ಹೆಸರಿಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ವೈ.ಬಿ. ಪಾಟೀಲ್, ದೇವಣ್ಣ ನಾಯಕ, ಗಂಗಾಧರ ನಾಯಕ ಸೇರಿ ಅನೇಕರಿದ್ದರು.