ಐಟಿಐನಲ್ಲಿ ಸೆಮಿಸ್ಟರ್ ಪದ್ಧತಿಗೆ ವಿರೋಧ
ಕ.ಪ್ರ. ವಾರ್ತೆ ರಾಯಚೂರು ಜ.8
ಐಟಿಐಗಳಲ್ಲಿ ನಡೆಸುವ ಕುಶಲಕರ್ಮಿ ತರಬೇತಿಯಲ್ಲಿ ಸರ್ಕಾರ ಏಕಾಏಕಿ ಸೆಮಿಸ್ಟರ್ ಪದ್ಧತಿಯನ್ನು ಜಾರಿಗೆ ತಂದಿರುವ ಕ್ರಮವನ್ನು ವಿರೋಧಿಸಿ ಬುಧವಾರ ನಗರದಲ್ಲಿ ಐಟಿಐ ಕಾಲೇಜು ವಿದ್ಯಾರ್ಥಿಗಳು ವಿವಿಧ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಧರಣಿ ನಡೆಸಿದವು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಎಐಡಿಎಸ್ಒ ಮತ್ತು ಎಐಡಿವೈಒ ಸಂಘಟನೆಗಳ ನೇತೃತ್ವದಲ್ಲಿ ಧರಣಿ ನಡೆಸಿದ ವಿವಿಧ ಐಟಿಐ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಮೂಲಕ ನವದೆಹಲಿಯ ಡೈರೆಕ್ಟರ್ ಜನರಲ್ ಆಫ್ ಎಂಪ್ಲಾಯಮೆಂಟ್ ಆ್ಯಂಡ್ ಟ್ರೈನಿಂಗ್ ವಿಭಾಗಕ್ಕೆ ದೂರು ಸಲ್ಲಿಸಿದರು.
ಆಗಸ್ಟ್ 2013ರಲ್ಲಿ ಪ್ರವೇಶ ಪ್ರಕ್ರಿಯೆ ಬಹುಪಾಲು ಮುಗಿದ ನಂತರದಲ್ಲಿ ಐಟಿಐನ ದೀರ್ಘಕಾಲೀನ ಬೋಧನಾ ಪದ್ಧತಿಯನ್ನು ಹಾಗೂ ತರಬೇತಿಯನ್ನು ಬದಲಿಸಿ ಯಾರೊಂದಿಗೂ ಸಮಾಲೋಚನೆ ನಡೆಸದೇ ಸೆಮಿಸ್ಟರ್ ಪದ್ಧತಿಯನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗಿದೆ ಎಂದು ದೂರಿದರು.
ಪಠ್ಯಕ್ರಮವನ್ನು ಸೆಮಿಸ್ಟರ್ಗೆ ಬದಲಾಯಿಸುವ ಅಗತ್ಯವೇನು ಎಂಬುದಕ್ಕೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನೂ ನೀಡಿಲ್ಲ. ಸೆಮಿಸ್ಟರ್ ಪದ್ಧತಿಯ ಜಾರಿಯಿಂದಾಗಿ ಬೋಧಕರು ಹಾಗೂ ಕಾಲೇಜುಗಳ ಪ್ರಾಚಾರ್ಯರು ಗೊಂದಲದಲ್ಲಿ ಸಿಲುಕಿದ್ದಾರೆ. ಐಟಿಐ ಪ್ರವೇಶ ಪಡೆದ ವಿದ್ಯಾರ್ಥಿಗಳೂ ಸಹ ಆತಂಕಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಐಟಿಐನಲ್ಲಿ ಹಳೆಯ ಪದ್ಧತಿಯಂತೆಯೇ ಪರೀಕ್ಷೆ ನಡೆಸಬೇಕು. ಸೆಮಿಸ್ಟರ್ ಪದ್ಧತಿ ಕೈಬಿಡಬೇಕೆಂದು ಆಗ್ರಹಿಸಿದರು. ಸಂಘಟನೆಗಳ ಪ್ರಮುಖರಾದ ಚನ್ನಬಸವ ಜಾನೇಕಲ್, ಪ್ರಮೋದಕುಮಾರ್, ದೀನದಯಾಳುಪತಿ, ಮಂಜು ಸೇರಿ ಅನೇಕರಿದ್ದರು.