ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಖಾತ್ರಿ' ಸಮರ್ಪಕ ಜಾರಿಗೆ ಕಟ್ಟುನಿಟ್ಟಿನ ಸೂಚನೆ

Mainashree
Updated On : 9 Jan 2014, 11:05 am

ಕ.ಪ್ರ. ವಾರ್ತೆ  ರಾಯಚೂರು  ಜ.8
ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಸಂಬಂಧಿಸಿ ತಾಪಂ ಮತ್ತು ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯ ತೋರುವಂತಿಲ್ಲ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಕೆಲಸ ನೀಡುವುದು ಕಡ್ಡಾಯ ಮತ್ತು ಅಂಥ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆ ತೆರೆಯಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಜಿಪಂ ಸಿಇಒ ವಿಜಯ ಜೋತ್ಸ್ನಾ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಉದ್ಯೋಗ ಖಾತ್ರಿ ಯೋಜನೆಯಡಿಯ ಕಾಮ್ ಮಾಂಗೋ ಅಭಿಯಾನದ ಜಿಲ್ಲಾ ಮಟ್ಟದ ರೋಜಗಾರ್ ದಿವಸ್ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಕಳೆದ ಅನೇಕ ವರ್ಷಗಳಿಂದ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿದೆ. ಆದರೂ ಯೋಜನೆಯಡಿ ಸಮಸ್ಯೆಗಳಿನ್ನೂ ಜಾರಿಯಲ್ಲಿರುವುದು ಅಧಿಕಾರಿಗಳ ಕಾರ್ಯವೈಖರಿಯನ್ನು ಸ್ಪಷ್ಟಪಡಿಸಿದೆ. ಯೋಜನೆಯ ಜಾರಿಯಲ್ಲಿ ಅಧಿಕಾರಿಗಳ ಲೋಪವನ್ನು ಸಹಿಸಲಾಗದು ಎಂದು ಎಚ್ಚರಿಸಿದರು.
ಲೋಪಕ್ಕೆ ಅಸಮಾಧಾನ: ಕಳೆದ 9 ತಿಂಗಳಿನಲ್ಲಿ 2 ಲಕ್ಷ ಜನರಿಗೆ ಕೆಲಸ ನೀಡಿದ್ದರೂ ಸದ್ಯ ಕಾಮ್ ಮಾಂಗೋ ಅಭಿಯಾನದಡಿ ಪುನಾ 2 ಲಕ್ಷ ಜನ ಕಾರ್ಮಿಕರು ಹೆಸರು ನೋಂದಾಯಿಸಿಕೊಳ್ಳಲು ಮತ್ತು ಕೆಲಸಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿರುವುದು ಯೋಜನೆಯ ಜಾರಿಯಲ್ಲಿ ಆಗಿರುವ ಲೋಪ ಹೊರಹಾಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಕಾಮ್ ಮಾಂಗೋ ಅಭಿಯಾನದಡಿ ಸಲ್ಲಿಕೆಯಾಗಿರುವ ಜಾಬ್ ಕಾರ್ಡುಗಳ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ಹಾಗೆಯೇ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆ ತೆರೆಯಲು ತಾಪಂ ಮತ್ತು ಗ್ರಾಪಂ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಆದೇಶಿಸಿದರು.
ಅರ್ಜಿ ತಿರಸ್ಕರಿಸಬೇಡಿ: ಈಗಾಗಲೇ ಎಲ್ಲರಿಗೂ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್ ವಿತರಿಸಲಾಗಿದೆ ಎಂದು ಜಿಪಂ ದಾಖಲೆಗಳು ಹೇಳುತ್ತಿದ್ದರೂ ಇನ್ನೂ 37 ಸಾವಿರ ಕೂಲಿ ಕಾರ್ಮಿಕರು ಜಾಬ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದು, ಜಾಬ್ ಕಾರ್ಡುಗಳ ನೀಡಿಕೆ ವಿಷಯವನ್ನು ತೀಕ್ಷ್ಣವಾಗಿ ಪರಿಗಣಿಸಿ ಪರಿಶೀಲನೆ ನಡೆಸಿ ವಾರದೊಳಗೆ ಮಾಹಿತಿ ನೀಡುವಂತೆ ಆದೇಶಿಸಿದರು.
ಗ್ರಾಪಂ ಪಿಡಿಒಗಳು ಯಾವುದೇ ಕಾರಣಕ್ಕೆ ಕೂಲಿ ಕಾರ್ಮಿಕರ ಕೆಲಸಕ್ಕಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ತಿರಸ್ಕರಿಸದಂತೆ ಸೂಚಿಸಿದ ಅವರು ಗ್ರಾಪಂ ಪಿಡಿಒಗಳು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಉದ್ಯೋಗ ಖಾತ್ರಿ ಯೋಜನೆ ಯಶಸ್ಸು ಕಾಣಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಪಿಡಿಒಗಳ ಕೆಲಸ: ಇದಕ್ಕೂ ಮೊದಲು ಗ್ರಾಕೂಸ್ ಸಂಘಟನೆಯ ಪ್ರಮುಖ ಅಭಯ್ ಸಭೆಯಲ್ಲಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಯಡಿಯ ಲೋಪಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಗ್ರಾಪಂ ಮಟ್ಟದಲ್ಲಿನ ಅಧಿಕಾರಿಗಳು ಉದ್ಯೋಗ ಕೇಳಿಬರುವವರನ್ನು ಕೀಳಾಗಿ ಕಾಣುತ್ತಿದ್ದಾರೆ. ಕೂಲಿ ಕಾರ್ಮಿಕರಿಗೆ ಎರಡು ಗ್ರಾಪಂ ಪಿಡಿಒಗಳು ಕೆಲಸ ನೀಡುವುದಿಲ್ಲ ಎಂದು ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯ ಯಶಸ್ಸಿಗೆ ಶ್ರಮಿಸುತ್ತಿದೆ. ಆದರೆ ಅಧಿಕಾರಿಗಳ ತಾತ್ಸಾರದಿಂದಾಗಿ ಯೋಜನೆ ದಾರಿ ತಪ್ಪಿದೆ. ಜಿಲ್ಲೆಯಲ್ಲಿ ಕಾಮ್ ಮಾಂಗೋ ಅಭಿಯಾನದಡಿ ನಡೆಸಿದ ಸಮೀಕ್ಷೆ ವೇಳೆ ಜಿಲ್ಲೆಯಲ್ಲಿ ಈಗಲೂ ಜಾಬ್ ಕಾರ್ಡು ಹೊಂದಿರದ ಹಾಗೂ ಅದಕ್ಕಾಗಿ ಅರ್ಜಿ ಸಲ್ಲಿಸಿದ 32,240 ಕುಟುಂಬಗಳಿರುವುದು ಪತ್ತೆಯಾಗಿದೆ. ಕಾರ್ಡು ಅವರಿಗೆ ಈಗಾಗಲೇ ಜಿಪಂ ದಾಖಲೆಗಳಂತೆ ನೀಡಿದ್ದರೆ ಅಂಥ ಕಾರ್ಡುಗಳು ಯಾರ ಬಳಿಯಿವೆ ಎಂಬುದರ ತನಿಖೆಯಾಗಬೇಕಿದೆ ಎಂದು ಒತ್ತಾಯಿಸಿದರು.
ಗ್ರಾಮ ರೋಜಗಾರ್ ದಿವಸ್ ಆಯೋಜಿಸಿಲ್ಲ: ಜಿಲ್ಲೆಯ ಅನೇಕ ಕಡೆ ಬ್ಯಾಂಕ್ ಖಾತೆಗಳನ್ನು ತೆರೆಯದ ಕಾರಣ ಕೂಲಿ ಕಾರ್ಮಿಕರಿಗೆ ಕೆಲಸ ನೀಡದೇ ಮರಳಿ ಕಳಿಸಲಾಗಿದೆ. ಯೋಜನೆಯಡಿಯ ಕಾನೂನಿನಂತೆ ಗ್ರಾಪಂ ಮಟ್ಟಿದಲ್ಲಿ ಬ್ಯಾಂಕ್ ಅಧಿಕಾರಿಗಳನ್ನೇ ಕರೆಯಿಸಿ ಬ್ಯಾಂಕ್ ಖಾತೆ ತೆರೆಯಲು ನೆರವಾಗಬೇಕಿದೆ. ಆದರೆ ಗ್ರಾಪಂ ಮಟ್ಟದಲ್ಲಿ ಗ್ರಾಮ ರೋಜಗಾರ್ ದಿವಸ್ ಆಯೋಜಿಸಿಲ್ಲ ಎಂದು ದೂರಿದರು.
ಪ್ರತಿ ಗುರುವಾರ ಗ್ರಾಪಂ ಮಟ್ಟದಲ್ಲಿ ಗ್ರಾಮ ರೋಜಗಾರ್ ದಿವಸ್ ಆಯೋಜಿಸಬೇಕಾದ ಗ್ರಾಪಂ ಸಿಬ್ಬಂದಿ ಅಂಥ ಯಾವುದೇ ಸಭೆ ನಡೆಸಿಲ್ಲ. ಇದುವರೆಗಿನ ಮಾಹಿತಿಯಂತೆ ಒಟ್ಟು 656 ಗ್ರಾಮ ರೋಜಗಾರ್ ದಿವಸ್ ನಡೆಯಬೇಕಿತ್ತು. ಆದರೆ ಕೇವಲ 56 ಕಡೆ ಆಯೋಜಿಸಿರುವುದು ಸಾಧನೆಗೆ ಮಂಕು ಕವಿಯುವಂತೆ ಮಾಡಿದೆ ಎಂದು ದೂರಿದರು.
ಪ್ರಾಮಾಣಿಕ ಪ್ರಯತ್ನ ಮಾಡಲಿ: ಒಟ್ಟಾರೆಯಾಗಿ ಜಿಲ್ಲೆಯ 10ರಿಂದ 12 ಗ್ರಾಪಂಗಳಲ್ಲಿ ಮಾತ್ರ ಉದ್ಯೋಗ ಖಾತ್ರಿ ಕಾಮಗಾರಿ ಸಮರ್ಪಕವಾಗಿದ್ದು, ಇನ್ನುಳಿದಂತೆ ಪಿಡಿಒಗಳ ಅಸಹಕಾರ, ಗ್ರಾಪಂ ಸಿಬ್ಬಂದಿ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಕೂಲಿ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗಿದೆ. ಕಾಮ್ ಮಾಂಗೋ ಅಭಿಯಾನದಿಂದ ಅನೇಕ ಕೂಲಿ ಕಾರ್ಮಿಕರಿಗೆ ಯೋಜನೆಯಲ್ಲಿ ಮತ್ತೆ ವಿಶ್ವಾಸ ಮೂಡಿದೆ. ಇನ್ನಾದರೂ ಅಧಿಕಾರಿಗಳು ಯೋಜನೆಯ ಸಮರ್ಪಕ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಮನವಿ ಮಾಡಿದರು.
ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಗಳ ಚರ್ಚಿಸಲಾಯಿತು. ಸಭೆಯಲ್ಲಿ ಜಿಪಂ ಅಧಿಕಾರಿಗಳಾದ ಟಿ. ರೋಣಿ, ಶರಣಬಸವರಾಜ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement