ಜಿಪಂ ಅಧಿಕಾರಿಗಳಿಂದ ಅಧ್ಯಕ್ಷ ಉಪಾಧ್ಯಕ್ಷರ ಕಡೆಗಣನೆ; ದೂರು
ರಾಯಚೂರು: ಉದ್ಯೋಗ ಖಾತ್ರಿಯ ಕಾಮ್ ಮಾಂಗೋ ಅಭಿಯಾನದ ಜಿಲ್ಲಾ ರೋಜಗಾರ್ ದಿವಸ್ ಸಭೆಗೆ ಆಗಮಿಸಿದ ಜಿಪಂ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಜಿಪಂ ಸಿಇಒ ಮತ್ತಿತರರು ಬರಮಾಡಿಕೊಳ್ಳದ್ದರಿಂದ ಅಸಮಾಧಾನಗೊಂಡ ಅವರು ಸಭಾಂಗಣದಿಂದ ಹೊರ ನಡೆದ ಘಟನೆ ಬುಧವಾರ ನಗರದಲ್ಲಿ ನಡೆಯಿತು.
ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್ ಹಾಗೂ ಉಪಾಧ್ಯಕ್ಷ ಕೆ. ಶರಣಪ್ಪ ಅವರಿಗೆ ಜಿಪಂ ಆಡಳಿತವು ಬುಧವಾರ ಉದ್ಯೋಗ ಖಾತ್ರಿ ಯೋಜನೆಯ ಕಾಮ್ ಮಾಂಗೋ ಅಭಿಯಾನದ ರೋಜಗಾರ್ ದಿವಸ್ ಸಭೆ ನಡೆಯಲಿದೆ. ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಆಯುಕ್ತ ಮುನೀಶ್ ಮೌದ್ಗಿಲ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಮೊದಲೇ ತಿಳಿಸಿ ಸಭೆಗೆ ಆಹ್ವಾನಿಸಿತ್ತು.
ಅಧಿಕಾರಿಗಳೇ ಮರೆತಿದ್ದಾರೆ: ಆದರೆ ಬುಧವಾರ ಬೆಳಗ್ಗೆ ಯೋಜನೆಯ ಆಯುಕ್ತರ ಆಗಮನ ರದ್ದಾಗಿದೆ. ಪರಿಣಾಮ ಜಿಪಂ ಸಿಇಒ ವಿಜಯ ಜೋತ್ಸ್ನಾ ಸೇರಿದಂತೆ ಮತ್ತಿತರ ಜಿಪಂ ಅಧಿಕಾರಿಗಳು ಜಿಲ್ಲಾ ಮಟ್ಟದ ರೋಜಗಾರ್ ದಿವಸ್ ಸಭೆಯನ್ನು ಆರಂಭಿಸಿದರು. ಈ ವೇಳೆ ಜಿಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಸಭೆಗೆ ಆಹ್ವಾನಿಸಿದ್ದು ಸ್ವತಃ ಅಧಿಕಾರಿಗಳೇ ಮರೆತಿದ್ದರು.
ಸಭೆ ನಡೆಯುತ್ತಿದ್ದ ವೇಳೆ ಸಭಾಂಗಣಕ್ಕೆ ಆಗಮಿಸಿದ ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್ ಮತ್ತು ಉಪಾಧ್ಯಕ್ಷ ಕೆ. ಶರಣಪ್ಪ ಅವರನ್ನು ಕಂಡ ಜಿಪಂ ಅಧಿಕಾರಿಗಳು ತಮ್ಮ ಆಸನದಲ್ಲಿ ಕುಳಿತೇ ಸಭೆ ನಡೆಸಿದ್ದು ಕಂಡುಬಂದಿತು. ಅಷ್ಟೇ ಅಲ್ಲ ಇಬ್ಬರೂ ಜನಪ್ರತಿನಿಧಿಗಳು ವೇದಿಕೆಯೇರಿ ನಿಂತಿದ್ದರೂ ಅಧಿಕಾರಿಗಳು ಅತ್ತ ಗಮನಹರಿಸದೇ ನಿರ್ಲಕ್ಷ್ಯ ತೋರಿದ್ದು ಕಂಡುಬಂದಿತು. ಇದರಿಂದ ಬೇಸರಗೊಂಡ ಅವರು ಸಭಾಂಗಣದಿಂದ ಹೊರನಡೆದರು.
ಆಹ್ವಾನಿಸಿ ಅಗೌರವ: ಈ ಕುರಿತು ನಂತರ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿದ ಜಿಪಂ ಅಧ್ಯಕ್ಷೆ ಲಲಿತಮ್ಮ ಮತ್ತು ಉಪಾಧ್ಯಕ್ಷ ಕೆ. ಶರಣಪ್ಪ ಅವರು, ಜಿಪಂ ಸಿಇಒ ತಮ್ಮನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದಾರೆ. ಸಭೆಗೆ ಆಹ್ವಾನಿಸಿ ಅಗೌರವ ತೋರಿದ್ದಾರೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಪಂಚಾಯಿತ್ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಸಚಿವರಿಗೆ ದೂರು ಸಲ್ಲಿಸಲಾಗುತ್ತದೆ ಎಂದು ಎಚ್ಚರಿಸಿದರು.
ಜಿಪಂ ಆಡಳಿತವು ದಿಕ್ಕು ತಪ್ಪಿದೆ. ಅಧಿಕಾರಿಗಳು ಮನಬಂದಂತೆ ವರ್ತಿಸುತ್ತಿದ್ದಾರೆ. ತಮ್ಮನ್ನು ಸಭೆಗೆ ಆಹ್ವಾನಿಸಿ ಆಸನ ನೀಡದೇ ಅಪಮಾನ ಮಾಡಲಾಗಿದೆ. ಅಧಿಕಾರಿಗಳ ದರ್ಪದ ವರ್ತನೆಯನ್ನು ಸಹಿಸಲಾಗದು ಎಂದು ಅಸಮಾಧಾನ ವ್ಯಕ್ತಪಡಿಸಿದರು.