ಸುದ್ದಿ ಸಂಕ್ಷೇಪ
ರಾಯಚೂರು ಇಂದು ಬಂದ್
ರಾಯಚೂರು: ತೊಗರಿ, ಹತ್ತಿ, ಬತ್ತ, ಕಡಲೆ ಮತ್ತಿತರೆ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆಗೆ ಒತ್ತಾಯಿಸಿ ಜ.9ರಂದು ರಾಯಚೂರು ಬಂದ್ಗೆ ಕರೆ ನೀಡಲಾಗಿದೆ ಎಂದು ರಾಜ್ಯ ರೈತಸಂಘ ಹಾಗೂ ಕರ್ನಾಟ ಪ್ರಾಂತ ರೈತಸಂಘ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಗಳ ಪ್ರಮುಖರಾದ ಮಲ್ಲಯ್ಯ ಜಾಲಹಳ್ಳಿ, ಸಂಗಯ್ಯಸ್ವಾಮಿ ಮತ್ತಿತರರು, ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಅದರಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಬೆಂಬಲ ಬೆಲೆಗೆ ಆಗ್ರಹಿಸಿ ಜ.9ರಂದು ರಾಯಚೂರು ಬಂದ್ಗೆ ಕರೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ವಾಣಿಜ್ಯೋದ್ಯಮಿಗಳು, ಎಪಿಎಂಸಿ ಸೇರಿದಂತೆ ಎಲ್ಲ ಅಂಗಡಿಗಳ ಮಾಲಿಕರು ಬಂದ್ಗೆ ಸಹಕರಿಸುವಂತೆ ಮನವಿ ಮಾಡಿರುವ ಸಂಘಟನೆಯ ನಾಯಕರು, ನಗರದ ಎಲ್ಲ ಪ್ರಗತಿ ಪರರು ಬಂದ್ಗೆ ಬೆಂಬಲಿಸಿ ಜ.9ರಂದು ಬೆಳಗ್ಗೆ 10ಕ್ಕೆ ಅಂಬೇಡ್ಕರ್ ವೃತ್ತದಲ್ಲಿ ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ಬೆಂಬೆಲೆ ತೊಗರಿ ಖರೀದಿ ಆರಂಭ
ರಾಯಚೂರು: ಗುಣಮಟ್ಟದ ತೊಗರಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್ಗೆ 5 ಸಾವಿರ ದರದಲ್ಲಿ ನಗರದ ಎಪಿಎಂಸಿಯ ಆವರಣದಲ್ಲಿ ಖರೀದಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿಯಿಂದ ಗುಣಮಟ್ಟದ ತೊಗರಿ ಖರೀದಿಸಲಾಗುತ್ತಿದೆ. ಕನಿಷ್ಠ 12ರಷ್ಟು ತೇವಾಂಶವಿರುವ ತೊಗರಿ ಮಾತ್ರ ಈ ದರಕ್ಕೆ ಖರೀದಿಸಲಾಗುತ್ತದೆ. ಪ್ರತಿ ರೈತರಿಂದ 20 ಕ್ವಿಂಟಲ್ ಮಾತ್ರ ಖರೀದಿಸಲಾಗುತ್ತದೆ. ಖರೀದಿಸಿದ ತೊಗರಿಗೆ ಪ್ರತಿಯಾಗಿ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.