ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಲಬೆರಕೆ ಒಳ್ಳೆಣ್ಣೆ ಮಾರಾಟ ಜಾಲ ಪತ್ತೆ

Mainashree
Updated On : 10 Jan 2014, 11:26 am

ಸಿಂಧನೂರು: ನಗರದ ಡಾ. ಆನಂದ ಹೆಗ್ಡೆ ಫಾರ್ಮ್‌ಗೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಬಡಾವಣೆಯಲ್ಲಿ ಮನೆ ಮತ್ತು ಗೋಡನ್ ನಿರ್ಮಿಸಿಕೊಂಡಿರುವ ಮಂಗಲ್ ಆರ್.ಪಟೇಲ್ ಶೇಟ್ ಎನ್ನುವ ವ್ಯಕ್ತಿಯು ಕಮಲ್ ಟ್ರೇಡಿಂಗ್ ಕಂಪನಿಯ ಹೆಸರಿನಲ್ಲಿ ರುಚಿಗೋಲ್ಡ್ ಕಂಪನಿಯ ಅಡುಗೆ ಎಣ್ಣೆಗೆ ಕಲುಷಿತ ಎಣ್ಣೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವ ಭಾರೀ ಪ್ರಮಾಣದ ಜಾಲ ಬಯಲಾಗಿದೆ.
ಸಾರ್ವಜನಿಕರ ದೂರಿನ ಮೇರೆಗೆ ಮಾಧ್ಯಮಗಳು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಮಾಹಿತಿ ತಿಳಿಸಿವೆ.  ಕಂಪನಿಗೆ ಬೀಗಮುದ್ರೆ: ಆಹಾರ ಶಿರಸ್ತೇದಾರ ಜಾನಿಮಿಯಾ, ಗ್ರಾಮಲೆಕ್ಕಾಧಿಕಾರಿ ಯೂನುಸ್ ಅವರು ತಹಸೀಲ್ದಾರ್ ವೆಂಕನಗೌಡ ಆರ್. ಪಾಟೀಲ್ ಆದೇಶದ ಮೇರೆಗೆ ಮಂಗಲ್ ಆರ್.ಪಟೇಲ್ ಶೇಟ್ ಅವರ ಕಮಲ್ ಟ್ರೇಡಿಂಗ್ ಕಂಪನಿಗೆ ಬೀಗಮುದ್ರೆ ಹಾಕಿದ್ದಾರೆ. ಸಮಗ್ರ ತನಿಖೆ ನಡೆಸುವ ಮೂಲಕ ಯಾವ ಪ್ರಮಾಣದಲ್ಲಿ ಅವ್ಯವಹಾರ ನಡೆಯುತ್ತಿದೆ ಎನ್ನುವ ಬಗ್ಗೆ ಖಚಿತ ಮಾಹಿತಿ ನೀಡುವುದಾಗಿ ಆಹಾರ ಶಿರಸ್ತೇದಾರ ಜಾನಿಮಿಯಾ ತಿಳಿಸಿದರು.
ರುಚಿಗೋಲ್ಡ್ ಕಂಪನಿಯ ಲೇಬಲ್: ಎಂ.ಆರ್. ಪಟೇಲ್ ಶೇಟ್‌ನ್ನ ಗೋದಾಮಿನ ತುಂಬೆಲ್ಲ ರುಚಿಗೋಲ್ಡ್ ಕಂಪನಿಯ ಲೇಬಲ್ ಹೊಂದಿರುವ ಖಾಲಿ ಡಬ್ಬಿಗಳು, ಖಾಲಿ ಪಾಕೆಟ್‌ಗಳನ್ನು ಸಂಗ್ರಹಿಸಿದ್ದು, ಕಳಪೆ ಅಡುಗೆ ಎಣ್ಣೆಯನ್ನು ನಾಲ್ಕೈದು ಬ್ಯಾರೆಲ್‌ಗಳಲ್ಲಿ ಸಂಗ್ರಹಿಸಿ ರುಚಿಗೋಲ್ಡ್ ಕಂಪನಿಯ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿದೆ.
1 ಕೆಜಿಗೆ 65 ಕ್ಕೆ: ಒರಿಜಿನಲ್ ರುಚಿಗೋಲ್ಡ್ ಕಂಪನಿಯ 1 ಕೆ.ಜಿ. ಎಣ್ಣೆ ಪಾಕೆಟ್‌ಗೆ 83 ಮುಖ ಬೆಲೆಯಿದೆ. ಆದರೆ ಕಲಬೆರಕೆ ಮಾಡಿದ ಎಣ್ಣೆಯನ್ನು ಶೇಟ್ 65 ಕ್ಕೆ ಮಾರಾಟ ಮಾಡುತ್ತಿದ್ದಾನೆ. ಗ್ರಾಮಾಂತರ ಪ್ರದೇಶದಲ್ಲಿ ಇದೇ ಎಣ್ಣೆ 75 ಕ್ಕೆ ಮಾರಾಟ ಮಾಡಲಾಗುತ್ತಿದೆ. ಅರ್ಧ ಕೆ.ಜಿ, 5 ಕೆ.ಜಿ, 10 ಕೆ.ಜಿ. ಹಾಗೂ 15 ಕೆಜಿಯ ಕಲಬೆರಕೆ ಎಣ್ಣೆ ಡಬ್ಬಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸಣ್ಣಪುಟ್ಟ ವ್ಯಾಪಾರಸ್ಥರೇ ಹೇಳುತ್ತಾರೆ.
ಹೋಲ್ಸೇಲ್ ದರದಲ್ಲಿ ಎಣ್ಣೆ ಮಾರಾಟ ಮಾಡುವ ಈ ಶೇಟ್ ಕನಿಷ್ಟ ಪರವಾನಗಿಯನ್ನು ಹೊಂದಿಲ್ಲ. ಮೇಲಾಗಿ ರುಚಿಗೋಲ್ಡ್ ಕಂಪನಿಯ ಅಧಿಕೃತ ಮಾರಾಟಗಾರನೂ ಅಲ್ಲ ಎಂದು ದಲಿತ ಮುಖಂಡರಾದ ಚಿಟ್ಟಿಬಾಬು, ನಾಗರಾಜ ಹೆಡಗಿಬಾಳ, ದುರುಗಪ್ಪ ಹೆಡಗಿಬಾಳ, ದುನಿಯಾ ಪತ್ರಿಕೆ ಸಂಪಾದಕ ನಾಗರಾಜ, ಚಂದ್ರಶೇಖರ ಸಾಸಲಮರಿ, ಮರಿಸ್ವಾಮಿ ಸಿಂಧನೂರು ಮತ್ತಿತರರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement