ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆದಾಯ ತೆರಿಗೆ ಸಂಗ್ರಹದಲ್ಲಿ ಜಿಲ್ಲೆ ಮುಂಚೂಣಿ

Lingaraj Badiger
Updated On : 11 Jan 2014, 11:39 am

ಕ.ಪ್ರ. ವಾರ್ತೆ, ರಾಯಚೂರು, ಜ.10
ಆದಾಯ ತೆರಿಗೆ ಸಂಗ್ರಹ ಕಾರ್ಯದಲ್ಲಿ ರಾಯಚೂರು ಆದಾಯ ತೆರಿಗೆ ಕಚೇರಿಯಿಂದ ವಾರ್ಷಿಕ ಗುರಿ ರು. 45 ಕೋಟಿ  ಆಗಿದ್ದು, ಈ ಪೈಕಿ ಈಗಾಗಲೇ ಡಿಸೆಂಬರ್ ಅಂತ್ಯದವರೆಗೆ ರು. 32ಕೋಟಿ ಸಂಗ್ರಹಿಸುವ ಮೂಲಕ ಸಾಧನೆ ಮೆರೆದಿದೆ ಎಂದು ಆದಾಯ ತೆರಿಗೆ ಇಲಾಖೆ ಬೆಂಗಳೂರು ವಲಯದ ಹಿರಿಯ ಆಯುಕ್ತ ಕೆ. ಸತ್ಯನಾರಾಯಣ ಶ್ಲಾಘಿಸಿದರು.
ಅವರು ನಗರದಲ್ಲಿ ಶುಕ್ರವಾರ ಆದಾಯ ತೆರಿಗೆ ಇಲಾಖೆಯ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ಗುಲ್ಬರ್ಗ ಕಚೇರಿ ವ್ಯಾಪ್ತಿಯಲ್ಲಿ ರಾಯಚೂರು ಕಚೇರಿಯಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಆದಾಯ ತೆರಿಗೆ ಸಂಗ್ರಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ತೆರಿಗೆ ಪಾವತಿದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆದಾಯ ತೆರಿಗೆ ಸೇವಾ ಕೇಂದ್ರ ಪ್ರಾರಂಭಿಸಲಾಗಿದೆ ಎಂದರು.
ಸೇವಾ ಕೇಂದ್ರ: ರಾಜ್ಯದ ಬೆಂಗಳೂರು, ಮಂಗಳೂರು ಮತ್ತಿತರೆಡೆ ಇಂಥ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಗುಲ್ಬರ್ಗ, ಮೈಸೂರು ಮತ್ತಿತರೆಡೆಯೂ ಸೇವಾ ಕೇಂದ್ರಗಳನ್ನು ತೆರೆದು ಗ್ರಾಹಕರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಸೇವಾ ಕೇಂದ್ರದಲ್ಲಿ ತಮ್ಮ ಕುಂದುಕೊರತೆಗಳ ಕುರಿತು ದೂರುದಾರರು ಅರ್ಜಿ ಸಲ್ಲಿಸಿದಲ್ಲಿ ಅಂಥವರಿಗೆ ನಿಗದಿತ ಕಾಲಮಿತಿಯೊಳಗೆ ಸಮಸ್ಯೆ ಪರಿಹರಿಸಲು ಇಲಾಖೆ ಕ್ರಮ ಕೈಗೊಳ್ಳಲಿದೆ. ಸೇವಾ ಕೇಂದ್ರಗಳ ಆರಂಭವು ದೇಶದ ಹಣಕಾಸು ಮಂತ್ರಿಗಳ ಕನಸಿನ ಕೂಸಾಗಿದೆ ಎಂದು ಹೇಳಿದರು.
ದೇಶದಲ್ಲಿಯೇ ಅತೀ ಹೆಚ್ಚು ಆದಾಯ ತೆರಿಗೆಯನ್ನು ಕರ್ನಾಟಕ ಮತ್ತು ಗೋವಾ ಸೇರಿದಂತೆ ಕಾರ್ಯ ನಿರ್ವಹಿಸುವ ಬೆಂಗಳೂರು ವಲಯ ಕಚೇರಿಯು ಸಂಗ್ರಹಿಸುತ್ತಿದೆ. ಪ್ರಸಕ್ತ ಆರ್ಥಿಕ ವರ್ಷಕ್ಕೆ ರು. 60 ಸಾವಿರ ಕೋಟಿ  ಗುರಿ ನೀಡಲಾಗಿದ್ದು, ಈಗಾಗಲೇ ರು. 42 ಸಾವಿರ ಕೋಟಿ ಡಿಸೆಂಬರ್ ಅಂತ್ಯದವರೆಗೆ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಪಾರದರ್ಶಕತೆ: ಈ ಸಂದರ್ಭದಲ್ಲಿ ಇಲಾಖೆಯ ಹುಬ್ಬಳ್ಳಿ ವಲಯದ ಹಿರಿಯ ಆಯುಕ್ತ ಪಿ.ಕೆ. ಶರ್ಮಾ ಮಾತನಾಡಿ, ಸೇವಾ ಕೇಂದ್ರ ಆರಂಭಿಸುವ ಮೂಲಕ ಇಲಾಖೆಯು ಆಡಳಿತದಲ್ಲಿ ಪಾರದರ್ಶಕತೆ ಮೆರೆಯುತ್ತಿದೆ. ಆದಾಯ ತೆರಿಗೆ ಪಾವತಿದಾರರಿಗೆ ಹೆಚ್ಚು ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಹುಬ್ಬಳ್ಳಿ ವಲಯ ಕಚೇರಿಗೆ ಪ್ರಸಕ್ತ ವರ್ಷಕ್ಕೆ ರು. 920.98 ಕೋಟಿ ನಿಗದಿ ಮಾಡಿದ್ದು, ಆ ಪೈಕಿ ಈಗಾಗಲೇ ರು. 650 ಕೋಟಿ ಸಂಗ್ರಹಿಸಿದ್ದು ಶೇ.70ರಷ್ಟು ಆದಾಯ ತೆರಿಗೆ ಸಂಗ್ರಹಿಸಲಾಗಿದೆ ಎಂದರು. ಕಳೆದ ವರ್ಷ ಡಿಸೆಂಬರ್ ಅಂತ್ಯದವರೆಗೆ ವಲಯ ವ್ಯಾಪ್ತಿಯಲ್ಲಿ ರು. 421 ಕೋಟಿ ಸಂಗ್ರಹಿಸಲಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ಆದಾಯ ತೆರಿಗೆ ಸಂಗ್ರಹಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಏರಿಕೆ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹುಬ್ಬಳ್ಳಿ ವಲಯದ ವ್ಯಾಪ್ತಿಯಲ್ಲಿ ರು. 2ಸಾವಿರ ಕೋಟಿ ಟಿಡಿಎಸ್ ಸಂಗ್ರಹಿಸುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ರು. 5ಸಾವಿರ ಕೋಟಿಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದ ಅವರು, ತೆರಿಗೆ ಪಾವತಿದಾರರು ಇಲಾಖೆಯೊಂದಿಗೆ ಕೈಜೋಡಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಗುಲ್ಬರ್ಗದ ಆಯುಕ್ತ ಗಣೇಶನ್ ಸೇರಿದಂತೆ ಇಲಾಖೆ ವಿವಿಧ ಕಚೇರಿಗಳ ಅಧಿಕಾರಿಗಳಿದ್ದರು. ನಗರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement