ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜೂಜುಕಟ್ಟೆಗಳಾಗಿರುವ ಸರ್ಕಾರಿ ಕಟ್ಟಡಗಳು

Lingaraj Badiger
Updated On : 11 Jan 2014, 11:41 am

ಕ.ಪ್ರ. ವಾರ್ತೆ, ಮುದಗಲ್, ಜ.10
ಸರ್ಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಕೋಟ್ಯಾಂತರ ರು. ಗಳನ್ನು ಮಂಜೂರು ಮಾಡಿ ನಿರ್ಮಿಸಿದ ಕಟ್ಟಡಗಳು ಅನೈತಿಕ ಚಟುವಟಿಕೆಗಳ ಕೇಂದ್ರಗಳಾಗಿ ಪರಿವರ್ತನೆಗೊಂಡಿರುವುದು ಸಾರ್ವಜನಿಕರಲ್ಲಿ ಅಸಮಧಾನಕ್ಕೆ ಕಾರಣವಾಗಿದೆ.
ನಾಗರಹಾಳದಿಂದ ಕೋಡಿಹಾಳ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ಜಿಪಂ ಎಸ್‌ಜೆಆರ್‌ವೈ ಯೋಜನೆಯಡಿ 2009-10ನೇ ಸಾಲಿನಲ್ಲಿ ನಿರ್ಮಿಸಲಾದ ಉತ್ಪಾದನೆ ಮತ್ತು ತರಬೇತಿ ಕೇಂದ್ರ ಇಸ್ಪಿಟ್ ಮತ್ತು ಕುಡುಕರಿಗೆ ಆಡ್ಡೆಯಾಗಿ ಪರಿವರ್ತನೆಗೊಂಡಿದೆ. ಅದೇ ಕೇಂದ್ರಕ್ಕೆ ಸೇರಿದ ಇನ್ನೊಂದು ಕಟ್ಟಡ ಉದ್ಘಾಟನೆಗೆ ಮುನ್ನವೇ ಜಾನುವಾರುಗಳ ಕೊಟ್ಟಿಗೆಯಾಗಿದೆ.
ಸ್ಥಗಿತಗೊಂಡ ಕಾಮಗಾರಿ: ಪಕ್ಕದಲ್ಲೇ ಗುರು ಸದನ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಪರಿಣಾಮ, ಇದು ಸಾರ್ವಜನಿಕರ ಶೌಚಾಲಯವಾಗಿ ಬಳಕೆಯಾಗುತ್ತಿದೆ. ಕಟ್ಟಡಕ್ಕಾಗಿ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅನುದಾನವನ್ನು ಬಿಡುಗಡೆ ಮಾಡಿ, ಕಾಮಗಾರಿ ಗುತ್ತಿಗೆಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಿದ್ದು ಅಧಿಕಾರಿಗಳು ಕಾಮಗಾರಿ ಅಪೂರ್ಣಗೊಳಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕಾಗಿ ತಂದಿದ್ದ ಇಟ್ಟಿಗೆ, ಕಿಟಕಿ, ಬಾಗಿಲುಗಳು ಕಳ್ಳರ ಪಾಲಾಗಿವೆ. ಕಟ್ಟಡದ ಸುತ್ತಲು ಮುಳ್ಳಿನ ಗಿಡಗಳು ಬೆಳೆದು ಭೂತ ಬಂಗಲೆಯಾಗಿದೆ.
ಮಾರುಕಟ್ಟೆ: ಸರ್ಕಾರ ಎಪಿಎಂಸಿಯಿಂದ ಆರ್‌ಡಿಎಫ್ ಯೋಜನೆಯಡಿ ರು. 12.50 ಲಕ್ಷ ಅನುದಾನದಲ್ಲಿ ಮಾರುಕಟ್ಟೆಯನ್ನು ನಿರ್ಮಿಸಿದ್ದು, ಅದು ಜನರಿಗೆ ಉಪಯೋಗವಾಗದೆ, ಇಸ್ಪಿಟ್, ಮದ್ಯಪಾನಿಗಳಿಗೆ ಕೇಂದ್ರವಾಗಿದೆ. ಈ ಮಾರುಕಟ್ಟೆ ಮುಂದೆ ಗ್ರಾಮದ ಚರಂಡಿ ನೀರು ಹರಿದು ಸಂಚಾರಕ್ಕೂ ಅಸಮರ್ಪಕ ಎನ್ನುವಂತಾಗಿದೆ.
ನಿರ್ಲಕ್ಷ್ಯ: ಗ್ರಾಮದಲ್ಲಿ ಕೋಟ್ಯಾಂತರ ರುಪಾಯಿ ಖರ್ಚು ಮಾಡಿ ನಿರ್ಮಿಸಲಾದ ಕಟ್ಟಡಗಳನ್ನು ನಿರ್ಧಿಷ್ಟ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿಲ್ಲ. ಇವು ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಪರಿವರ್ತನೆಗೊಂಡಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಟ್ಟಡಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿರುವುದು ಸರ್ಕಾರದ ಅನುದಾನ ವ್ಯರ್ಥ ಪೋಲು ಮಾಡಿದಂತಾಗಿದೆ.
ಪಕ್ಕದಲ್ಲಿ ಕೃಷ್ಣಾ ನದಿ ಇದೆ. ಇಲ್ಲಿ ಸಾಕಷ್ಟು ಮೀನುಗಾರರೂ ಇದ್ದಾರೆ. ಮೀನು ಮಾರುಕಟ್ಟೆ ನಿರ್ಮಿಸಿದ್ದರೂ, ಉಪಯೋಗಕ್ಕಿಲ್ಲದೆ ಇರುವುದು ಮೀನುಗಾರರಿಗೆ ನಿರಾಶೆ ಮೂಡಿಸಿದೆ. ಗ್ರಾಮದ ಪ್ರಗತಿಪರ ಸಂಘಟನೆಗಳು ಸರ್ಕಾರಿ ಕಟ್ಟಡಗಳನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಹೋರಾಟ ಮಾಡಬೇಕು. ಸರ್ಕಾರದ ಉದ್ದೇಶ ಸಫಲವಾಗುವಂತೆ ಮಾಡಬೇಕಾಗಿದೆ.
-ಪಂಪಯ್ಯ ಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement