ಬೋಸರಾಜು ವಿರುದ್ಧ ಶಿಸ್ತು ಕ್ರಮಕ್ಕೆ ನಾಯಕ ಒತ್ತಾಯ
ರಾಯಚೂರು: ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬೋಸರಾಜು ಅವರು ಪಕ್ಷದ ಶಿಸ್ತಿಗೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕೂಡಲೇ ಹೈಕಮಾಂಡ್ ಶಿಸ್ತುಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡದ ವಿಭಾಗದ ಉಪಾಧ್ಯಕ್ಷ ಬಾಬು ನಾಯಕ(ಲಾಲಪ್ಪ ನಾಯಕ) ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ಅನೇಕ ವರ್ಷಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ರೈತರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದೆ. ಬೋಸರಾಜು ಅವರು ಅನಗತ್ಯವಾಗಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಮೂಲಕ ಅನ್ಯಾಯ ಮಾಡಿರುವುದು, ಅವರು ರೈತರೆಡೆಗೆ ಇರಿಸಿಕೊಂಡಿರುವ ಧೋರಣೆಯನ್ನು ಸ್ಪಷ್ಟಪಡಿಸಿದೆ ಎಂದಿದ್ದಾರೆ.
ಕಳೆದ ಲೋಕಸಭೆ ಮತ್ತು ಈಚೆಗೆ ನಡೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬೋಸರಾಜು ಅವರು ರೈತರ, ಕೃಷಿ ಕಾರ್ಮಿಕರ ಹಿತದ ಬಗ್ಗೆ ಹೆಚ್ಚಿನ ಗಮನ ನೀಡದಿರುವುದು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಗುಂಪುಗಾರಿಕೆ ನಡೆಸಿದ್ದರಿಂದ ರಾಯಚೂರು ನಗರ ಮತ್ತು ಗ್ರಾಮೀಣ ಕ್ಷೇತ್ರ ಹಾಗೂ ಲಿಂಗಸ್ಗೂರಿನಲ್ಲಿ ಕಾಂಗ್ರೆಸ್‌ಗೆ ಸೋಲಾಯಿತೆಂದು ಆರೋಪಿಸಿದ್ದಾರೆ.
ಮಂತ್ರಿ ಮಂಡಲದ ವಿಸ್ತರಣೆಯಲ್ಲಿಯೂ ಜಿಲ್ಲೆಗೆ ಅನ್ಯಾಯವಾಗಲು ಬೋಸರಾಜು ಅವರೇ ಕಾರಣ ಎಂದು ಆರೋಪಿಸಿರುವ ಬಾಬು ನಾಯಕ, ಅವರ ವರ್ತನೆಯಿಂದ ಪಕ್ಷದ ಸಂಘಟನೆಗೆ ಹಿನ್ನಡೆಯಾಗಿದೆ ಎಂದು ದೂರಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಬೋಸರಾಜು ಅವರ ವಿರುದ್ಧ ರೈತರ ವಿರೋಧಿ ನೀತಿ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಲೋಕಸಭೆ ಚುನಾವಣೆ ವೇಳೆ ಪಕ್ಷಕ್ಕೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ.