ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಮಸ್ಕಿ ಬಂದ್ ಯಶಸ್ವಿ
ಕ.ಪ್ರ. ವಾರ್ತೆ, ಮಸ್ಕಿ, ಜ.10
ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ತೀರಾ ಹದಗೆಟ್ಟಿದ್ದು, ಅವುಗಳ ದುರಸ್ತಿಗೆ ಸರ್ಕಾರ ನಿರ್ಲಕ್ಷ್ಯ ತೋರಿದ್ದನ್ನು ಖಂಡಿಸಿ ಶುಕ್ರವಾರ ಮಸ್ಕಿ ಬಂದ್ ಆಚರಿಸಲಾಯಿತು. ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು, ಶಾಲಾ ಕಾಲೇಜುಗಳು, ಬ್ಯಾಂಕ್‌ಗಳು ಮುಚ್ಚುವ ಮೂಲಕ ಬಂದ್‌ಗೆ ಸಂಪೂರ್ಣ ಬೆಂಬಲಿಸಿದವು. ಹೊಟೇಲ್ ಹಾಗೂ ಆಟೋಗಳ ಸಂಚಾರ ಸ್ಥಗಿತಗೊಂಡಿದ್ದು, ವ್ಯಾಪಾರ ವಹಿವಾಟು ನಡೆಯಲಿಲ್ಲ. ಅದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.
ರ್ಯಾಲಿ: ಹೋರಾಟ ಸಮಿತಿಯು ಬಂದ್‌ಗೆ ಸಂಬಂಧಿಸಿದಂತೆ ಕರೆದಿದ್ದ ಸಭೆಗಳಲ್ಲಿ ಪಾಲ್ಗೊಂಡಿದ್ದ ಅನೇಕ ಕಾಂಗ್ರೆಸ್ ನಾಯಕರು ಬಂದ್ ವೇಳೆ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲಿಲ್ಲ. ಬಂದ್ ಸಂದರ್ಭ ಪಟ್ಟಣದ ಭ್ರಮರಾಂಬಾ ದೇವಸ್ಥಾನದಿಂದ ಆರಂಭಗೊಂಡ ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿಯ ಪ್ರತಿಭಟನಾ ರ್ಯಾಲಿಯು ಪ್ರಮುಖ ಬೀದಿಗಳ ಮೂಲಕ ಸಾಗಿ ಹಳೆ ಬಸ್ ನಿಲ್ದಾಣವನ್ನು ತಲುಪಿತು.
ರ್ಯಾಲಿಯುದ್ದಕ್ಕೂ ಪ್ರತಿಭಟನಾಕಾರರು ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸಹಾಯಕ ಆಯುಕ್ತ ಯೋಗೇಶ್ ಅವರಿಗೆ ಮನವಿ ಸಲ್ಲಿಸಿದ ಹೋರಾಟ ಸಮಿತಿಯ ಮುಖಂಡರು, ಮಸ್ಕಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿಗೆ ಸರ್ಕಾರವನ್ನು ಒತ್ತಾಯಿಸಿದರು.
ಸರ್ಕಾರಕ್ಕೆ ಗಡವು: ಮಸ್ಕಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳೂ ಸಂಪೂರ್ಣ ಹಾಳಾಗಿವೆ. ತಿಂಗಳೊಳಗೆ ಸರ್ಕಾರಕ್ಕೆ ಗಡುವು ನೀಡಲಾಗುತ್ತಿದ್ದು, ಆ ಹೊತ್ತಿಗೆ ರಸ್ತೆಗಳ ದುರಸ್ತಿಯಾಗಬೇಕು ಎಂದು ಆಗ್ರಹಿಸಿದ ಹೋರಾಟಗಾರರು ತಪ್ಪಿದಲ್ಲಿ ಚಳವಳಿ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಮಹಾದೇವಪ್ಪಗೌಡ, ಉಪಾಧ್ಯಕ್ಷ ತಿಮ್ಮನಗೌಡ, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಮಾತನಾಡಿ, ಮೂಲ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಅಸಡ್ಡೆ ತೋರುವಂತಿಲ್ಲ ಎಂದು ಎಚ್ಚರಿಸಿದರು.
ಮುಖಂಡರಾದ ರಾಜಶೇಖರ ಪಾಟೀಲ್, ಯಂಕನಗೌಡ ಮಲ್ಕಾಪೂರ, ಸಮಿತಿಯ ಸಂಚಾಲಕ ಡಾ.ಸಿವಶರಣಪ್ಪ ಇತ್ಲಿ, ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂಗಮೇಶ ಹತ್ತಿಗುಡ್ಡ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಯಮನೂರು ಓಡೆಯರ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮಸ್ಕಿ ಘಟಕದ ಅಧ್ಯಕ್ಷ ಅಬ್ದುಲ್ ಗನಿಸಾಬ್, ಮಲ್ಲಿಕಾರ್ಜುನ ಹೂವಿನಭಾವಿ, ಬಸಣ್ಣ ತೊಂತನಾಳ, ಬಸಣ್ಣ ತೊಂತನಾಳ, ಶೇಖರಪ್ಪ ತಳವಾರ, ರೈತ ಸಂಘದ ಕಾರ್ಯದರ್ಶಿ ಶಫಿ ಶೇರು ಮತ್ತಿತರರಿದ್ದರು. ಪಟ್ಟಣ ಸೇರಿದಂತೆ ಕ್ಷೇತ್ರದ ಹಳ್ಳಿಗಳಿಂದ ಆಗಮಿಸಿದ್ದ ಸಾವಿರಾರು ಜನ ಮಸ್ಕಿ ಬಂದ್ ಹಾಗೂ ರಸ್ತೆ ತಡೆ ಚಳವಳಿಯಲ್ಲಿ ಪಾಲ್ಗೊಂಡಿದ್ದರು.
ಬೆಂಬಲ: ವರ್ತಕರ ಸಂಘ, ಬಿಜೆಪಿ, ಜಯ ಕರ್ನಾಟಕ, ಮ್ಯಾಕ್ಸಿ ಕ್ಯಾಬ್ ಮಾಲಕರ ಸಂಘ, ಆಟೋ ಚಾಲಕರ ಸಂಘ, ಉತ್ತರ ಕರ್ನಾಟಕ ರೈತ ಸಂಘ, ಪತಂಜಲಿ ಯೋಗ ಸಮಿತಿ, ಕನ್ನಡ ಸೇನೆ, ವೇಲ್ಫೇರ್ ಪಾರ್ಟಿ, ಚಲುವಾದಿ ಸಂಘ, ವಿವಿಧ ಸಂಘಟನೆಗಳು ಮಸ್ಕಿ ಬಂದ್‌ಗೆ ಬೆಂಬಲಿಸಿದ್ದವು.