ಅಧಿಕಾರಿ ವರ್ಗಾವಣೆ; ಹೋರಾಟ ಸಮಿತಿ ವಿರೋಧ
ರಾಯಚೂರು: ಇಲ್ಲಿನ ಸಹಾಯಕ ಆಯುಕ್ತೆ ಮಂಜುಶ್ರೀ ಅವರ ವರ್ಗಾವಣೆಯನ್ನು ರದ್ದುಗೊಳಿಸಿ ಹಾಲಿ ಸ್ಥಳದಲ್ಲಿಯೇ ಮುಂದುವರಿಸುವಂತೆ ಜಿಲ್ಲಾ ಹತ್ತಿ ಬೆಳೆಗಾರ ರೈತರ ಹೋರಾಟ ಸಮಿತಿ ಒತ್ತಾಯಿಸಿದೆ. ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಕಳೆದ 16 ತಿಂಗಳ ಹಿಂದಷ್ಟೇ ಜಿಲ್ಲೆಗೆ ವರ್ಗಾವಣೆಗೊಂಡು ಆಗಮಿಸಿದ್ದ ಸಹಾಯಕ ಆಯುಕ್ತೆ ಮಂಜುಶ್ರೀ ಅವರನ್ನು ಸರ್ಕಾರ ಪುನಾ ಈಚೆಗೆ ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಿದೆ. ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿದ್ದು, ಜಿಲ್ಲೆಗೆ ಇಂಥ ಅಧಿಕಾರಿಗಳ ಅವಶ್ಯಕತೆಯಿದೆ ಎಂದು ಸಮಿತಿ ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಅವರ ವರ್ಗಾವಣೆಯನ್ನು ರದ್ದುಗೊಳಿಸಬೇಕು. ಹಾಲಿ ಸ್ಥಳದಲ್ಲಿಯೇ ಮುಂದುವರಿಸುವಂತೆ ಸಂಘದ ಅಧ್ಯಕ್ಷ ಚಿನ್ನಯ್ಯ ನಾಯಕ, ಎಂ. ರಾಮನಗೌಡ, ಪಾಂಡುರಂಗ, ನರಸಪ್ಪ, ಗೋವಿಂದು, ವೆಂಕಣ್ಣ ನಾಯಕ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.