ಅಪಘಾತ; ಗಾಯಾಳು ದೌಲಪ್ಪ ಸಾವು
ಸಿಂಧನೂರು: ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆ್ಯಂಬ್ಯುಲೆನ್ಸ್ನ ಚಾಲಕ ದೌಲಪ್ಪ ಇತ್ತೀಚೆಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಸಿಂಧನೂರಿನಿಂದ ಜ.5ರ ರಾತ್ರಿ ರೋಗಿಯೊಬ್ಬರನ್ನು ಆ್ಯಂಬ್ಯುಲೆನ್ಸ್ನಲ್ಲಿ ಬಳ್ಳಾರಿ ಆಸ್ಪತ್ರೆಗೆ ಸೇರಿಸಿ ಮರಳುತ್ತಿದ್ದ ವೇಳೆ ಬೂದಿವಾಳ ಕ್ಯಾಂಪ್ ಬಳಿ ಲಾರಿ ಆ್ಯಂಬ್ಯುಲೆನ್ಸ್ಗೆ ಡಿಕ್ಕಿಯಾಗಿದ್ದರಿಂದ ದೌಲಪ್ಪ ತೀವ್ರ ಗಾಯಗೊಂಡಿದ್ದರು. ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ದೌಲಪ್ಪ ಅವರು ಜ.9ರಂದು ನಿಧನರಾಗಿದ್ದು ಅವರ ಸ್ವಗ್ರಾಮ ಜೇವರ್ಗಿ ತಾಲೂಕಿನ ಹರವಾಳಕ್ಕೆ ಇತ್ತೀಚೆಗೆ ಅವರ ಕಳೇಬರವನ್ನು ಕೊಂಡೊಯ್ಯಲಾಯಿತು. ಈ ವೇಳೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆರೋಗ್ಯ ಅಧಿಕಾರಿ ಸೈಯ್ಯದ್ ಹಸನ್ ಹುಸೇನ್, ಮುಖ್ಯ ವೈದ್ಯಾಧಿಕಾರಿ ಕರವೀರಪ್ರಭು ಕ್ಯಾಲಕೊಂಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪ ಸೇರಿ ಆರೋಗ್ಯ ಇಲಾಖೆಯ ಸಿಬ್ಬಂದಿ ಗೌರವ ಸಲ್ಲಿಸಿದರು.