ಬಣವೆಗೆ ಬೆಂಕಿ: 10 ಸಾವಿರ ಹಾನಿ
ಸಿಂಧನೂರು: ನಗರದ 15ನೇ ವಾರ್ಡ್ನ ವ್ಯಾಪ್ತಿಯಲ್ಲಿ ಬರುವ ಖದರಿಯಾ ಕಾಲೋನಿಯಲ್ಲಿರುವ ಚಾಂದ್ಬೀ ತಂದೆ ರಾಜಸಾಬ ಎನ್ನುವವರ ಹುಲ್ಲಿನ ಬಣವೆಗೆ ಯಾರೋ ಹುಡುಗರು ಬೆಂಕಿ ಹಚ್ಚಿದ್ದು, ಹುಲ್ಲಿನ ಬಣವೆ ಸುಟ್ಟು ಭಸ್ಮಗೊಂಡ ಘಟನೆ ನಡೆದಿದೆ. ಈ ಘಟನೆಯಲ್ಲಿ ರು. 10 ಸಾವಿರಕ್ಕೂ ಅಧಿಕ ಮೌಲ್ಯದ ಬಣವೆ ನಾಶವಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. 15ನೇ ವಾರ್ಡ್ ನಗರಸಭೆ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡ ಅಲಿಸಾಬ ಮೇಸ್ತ್ರಿ ಮತ್ತಿತರ ಯುವಕರು ಬಣವೆಗೆ ಹತ್ತಿದ ಬೆಂಕಿ ನಂದಿಸಲು ಪ್ರಯತ್ನಿಸಿದರು. ಅಗ್ನಿಶಾಮಕ ದಳದ ಮಾರ್ಕಂಡೇಯ, ರಾಮಣ್ಣ, ಸಂಪತ್, ಶ್ರೀಧರ ಸಕಾಲಕ್ಕೆ ಆಗಮಿಸಿ ಅನಾಹುತ ತಪ್ಪಿಸಿದ್ದಾರೆ.