ಮುಂಗಡ ಪಾವತಿಗೆ ಒತ್ತಾಯಿಸಿ ಸಿಇಒಗೆ ದೂರು
ರಾಯಚೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ವಿವಿಧ ಮುಂಗಡ ಹಣವನ್ನು ಮಂಜೂರು ಮಾಡದಿರುವ ಬಗ್ಗೆ ಕರ್ನಾಟಕ ದಲಿತ ನೌಕರರ ಒಕ್ಕೂಟದ ಜಿಲ್ಲಾ ಘಟಕ ಆರೋಪಿಸಿದೆ. ಈ ಕುರಿತು ಇತ್ತೀಚೆಗೆ ಜಿಪಂ ಸಿಇಒಗೆ ದೂರು ಸಲ್ಲಿಸಿ, ರಾಜ್ಯ ಉದ್ಯೋಗ ವೃಂದದಲ್ಲಿ ಕಾಯಂ ಆಗಿ ಸೇವೆ ಸಲ್ಲಿಸುತ್ತಿರುವ ಎಲ್ಲ ಸರ್ಕಾರಿ ನೌಕರದಾರರಿಗೆ ಬೈಕ್, ಗಣಕಯಂತ್ರ, ಬೈಸಿಕಲ್, ಸಾಧನಾ ಸಾಮಗ್ರಿ ಸೇರಿದಂತೆ ವಿವಿಧ ವಸ್ತು, ಯಂತ್ರೋಪಕರಣಗಳ ಖರೀದಿಗೆ ಮುಂಗಡವಾಗಿ ಮೊತ್ತವನ್ನು ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ(ಆಡಳಿತ ಇಲಾಖೆ)ಗಳ ಆದೇಶ ಸ್ಪಷ್ಟವಾಗಿದ್ದರೂ ಡಿಡಿಪಿಐ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಅರ್ಜಿ ಸಲ್ಲಿಸಿದ್ದರೂ ಮಂಜೂರು ಮಾಡುತ್ತಿಲ್ಲ. ಡಿಡಿಪಿಐ ಅವರು ಹಬ್ಬದ ಮುಂಗಡ ಬಿಟ್ಟು ಬೇರಾವ ಕಾರಣಕ್ಕೆ ಕಾಯಿದೆಯಲ್ಲಿ ಅನುಮತಿಯಿದ್ದರೂ ಮಂಜೂರಾತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಕೂಡಲೇ ಶಿಕ್ಷಕರಿಗೆ ಮುಂಗಡ ಮೊತ್ತ ಮಂಜೂರಾತಿ ನಿಟ್ಟಿನಲ್ಲಿ ಡಿಡಿಪಿಐ ಅವರಿಗೆ ಸೂಕ್ತ ಆದೇಶ ನೀಡುವಂತೆ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಣ್ಣ ತಾಯಪ್ಪ ಮತ್ತಿತರರು ಮನವಿ ಮಾಡಿದ್ದಾರೆ.