ಶಿಥಿಲಾವಸ್ಥೆಯಲ್ಲಿ ಸೇತುವೆ; ದುರಸ್ತಿಗೆ ಒತ್ತಾಯ
ರಾಯಚೂರು: ತಾಲೂಕಿನ ದೇವಸೂಗೂರು ಗ್ರಾಮದ ಬಳಿಯಿರುವ ಕೃಷ್ಣಾ ನದಿ ಮೇಲಿನ ಸೇತುವೆಯ ದುರಸ್ತಿ ಮತ್ತು ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಾಣ ಮಾಡುವಂತೆ ಭಾರತ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ. ಈ ಕುರಿತು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿರುವ ಸಂಘಟನೆಯು, ಕೃಷ್ಣಾ ನದಿ ಮೇಲಿನ ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು, ಸೇತುವೆಯ ಮೇಲಿನ ರಸ್ತೆಯನ್ನು ಸಂಘಟನೆಯಿಂದ ಈ ಹಿಂದೆ ನಡೆಸಿದ ಹೋರಾಟದ ನಂತರದಲ್ಲಿ ದುರಸ್ತಿ ಕೈಗೊಳ್ಳಲಾಗಿತ್ತು. ಆದರೆ ಸದ್ಯ ಮತ್ತೆ ಸೇತುವೆಯು ಹಾನಿಗೀಡಾಗಿದ್ದು, ಕೂಡಲೇ ಶಾಶ್ವತ ದುರಸ್ತಿಗೆ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು. ಭಾರೀ ಸರಕು ಹೊತ್ತ ವಾಹನಗಳ ಸಂಚಾರ ನಿಷೇಧಿಸುವ ಮೂಲಕ ಹೊಸದಾಗಿ ಸೇತುವೆ ನಿರ್ಮಾಣ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಬೇಕು. ಹಾಲಿ ಸೇತುವೆಯ ಮೇಲಿನ ರಸ್ತೆ ದುರಸ್ತಿಗೊಳಿಸಬೇಕು ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಧರ್ಮರಾಜ್ ಶಾವನಾಳಕರ್ ಒತ್ತಾಯಿಸಿದ್ದಾರೆ.