ಶೌಚಾಲಯ ನಿರ್ಮಾಣಕ್ಕೆ ಕರವೇ ಒತ್ತಾಯ
ರಾಯಚೂರು: ನಗರದ ನೀರಬಾವಿ ಕುಂಟಾದಲ್ಲಿರುವ ದಲಿತರ ಬಡಾವಣೆಯಲ್ಲಿ ಮಹಿಳಾ ಶೌಚಾಲಯ ಹಾಗೂ ರಸ್ತೆ ನಿರ್ಮಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ. ಈ ಕುರಿತು ಪೌರಾಯುಕ್ತರಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಜಿಲ್ಲಾಧ್ಯಕ್ಷ ವಿನೋದರೆಡ್ಡಿ ಮತ್ತಿತರರು, ನೀರಬಾವಿ ಕುಂಟಾ ಪ್ರದೇಶದಲ್ಲಿ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆಯಿಲ್ಲವಾಗಿದೆ. ಅದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ನಿರ್ಮಿಸಿದ್ದ ಶೌಚಾಲಯವು ನಿರ್ವಹಣೆಯ ಕೊರತೆಯಿಂದ ಹಾಳಾಗಿದೆ ಎಂದು ದೂರಿದರು. ಈ ಪ್ರದೇಶದ ಮಹಿಳೆಯರು ಸದ್ಯ ರಾತ್ರಿಯವರೆಗೆ ಕಾದು ನಂತರ ಶೌಚಾಲಯಕ್ಕೆ ತೆರಳುವಂಥ ಸ್ಥಿತಿಯಿದೆ. ನಗರಸಭೆಯು ಕೂಡಲೇ ಮಹಿಳೆಯರಿಗೆ ಶೌಚಾಲಯ ನಿರ್ಮಿಸಬೇಕು. ಬಾಲಂಕು ಆಸ್ಪತ್ರೆಯಿಂದ ಮುನ್ನೂರುವಾಡಿ ಶಾಲೆಯ ವರೆಗೆ ಸಮರ್ಪಕ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ದೇವೇಂದ್ರ ರೆಡ್ಡಿ, ಹೊನ್ನಪ್ಪ, ನರಸಿಂಹಲು, ರಾಮುಲಮ್ಮ, ಭವನಮ್ಮ, ಅಂಜಿ, ದೇವ, ಜಂಬಪ್ಪ ಅನೇಕರಿದ್ದರು.