ಮುಖ್ಯಮಂತ್ರಿಯಿಂದಲೇ ಹೈ.ಕ.ಕ್ಕೆ ವಂಚನೆ
ಕ.ಪ್ರ. ವಾರ್ತೆ ರಾಯಚೂರು ಜ.12
ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ 371(ಜೆ)ನೇ ಕಲಂ ಅನ್ವಯ ನೀಡಿದ ಮೀಸಲಾತಿ ಸೌಲಭ್ಯ ದೊರಕಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ವಿಫಲವಾದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆ ಪಕ್ಷದ ವಿರುದ್ಧ ರಾಜಕೀಯ ಚಳವಳಿ ಆರಂಭಿಸುವುದಾಗಿ ಜನಸಂಗ್ರಾಮ ಪರಿಷತ್ ಮುಖಂಡ ರಾಘವೇಂದ್ರ ಕುಷ್ಟಗಿ ಎಚ್ಚರಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಹೈ.ಕ. ಭಾಗಕ್ಕೆ ಸುದೀರ್ಘ ಹೋರಾಟದ ನಂತರದಲ್ಲಿ 371(ಜೆ)ನೇ ಕಲಂ ಅಡಿ ವಿಶೇಷ ಸ್ಥಾನಮಾನ ದೊರೆತಿದೆ. ರಾಷ್ಟ್ರಪತಿಗಳ ಅಂಕಿತವೂ ಬಿದ್ದಿದೆ. ಮೀಸಲಾತಿ ನಿಗದಿ ಮಾಡಿ ಅಧಿಸೂಚನೆ ಹೊರಡಿಸಿದ್ದರೂ ರಾಜ್ಯ ಸರ್ಕಾರವೇ ಹೈ.ಕ. ಭಾಗದವರಿಗೆ ಅನ್ಯಾಯ ಉಂಟು ಮಾಡುವ ರೀತಿಯಲ್ಲಿ ನಿಯಮ ಉಲ್ಲಂಘಿಸುವ ಆದೇಶ ಹೊರಡಿಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಿಟಿಯು ನೇಮಕಾತಿಯಲ್ಲಿ ವಂಚನೆ: ಗುಲ್ಬರ್ಗದ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ತಮ್ಮ ಪ್ರಯತ್ನದಿಂದಲೇ ಹೈ.ಕ. ಭಾಗಕ್ಕೆ 371(ಜೆ)ನೇ ಕಲಂ ಅಡಿ ವಿಶೇಷ ಸ್ಥಾನಮಾನದ ಮೀಸಲಾತಿ ದೊರೆತಿದೆ ಎಂದು ಹೇಳಿಕೊಳ್ಳುತ್ತಿದ್ದು, ಅವರದ್ದೇ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹೈ.ಕ. ಭಾಗದವರನ್ನು ವಂಚಿಸಿದ್ದಾರೆಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಹೈ.ಕ. ಭಾಗದವರಿಗೆ ಉದ್ಯೋಗದಲ್ಲಿ ಮೀಸಲಾತಿಗೆ ನಿಯಮ ಜಾರಿಗೆ ತಂದಿದ್ದರೂ ಅವುಗಳನ್ನು ಮೀರಿ ನೇಮಕಾತಿ ಆದೇಶ ಹೊರಡಿಸುವಂತೆ ವಿವಿಯ ಆಡಳಿತಕ್ಕೆ ಸೂಚಿಸಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಸಿಎಂ ಈ ನಿಟ್ಟಿನಲ್ಲಿ ಉಂಟಾಗಿರುವ ದೋಷ ಸರಿಪಡಿಸದಿದ್ದರೆ ಯಾರಿಗೂ ಮನವಿ ಸಲ್ಲಿಸುವುದಿಲ್ಲ. ಬದಲಿಗೆ ಮುಂದಿನ ದಿನಗಳಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಜನಜಾಗೃತಿ ಮೂಡಿಸುವುದಾಗಿ ಎಚ್ಚರಿಸಿದರು.
ಹೈ.ಕ .ಶಾಸಕರು ಎಚ್ಚೆತ್ತುಕೊಳ್ಳಲಿ: ಪರಿಷತ್ತಿನ ಜಿಲ್ಲಾ ಸಂಚಾಲಕ ಡಾ. ರಜಾಕ್ ಉಸ್ತಾದ್ ಮಾತನಾಡಿ, 371ನೇ ಕಲಂ ಅಡಿ ಎಲ್ಲ ಸೌಲಭ್ಯಗಳ ಸಮರ್ಪಕ ಜಾರಿಗೆ ಸರ್ಕಾರ ಕಾಳಜಿ ವಹಿಸಬೇಕು. ಹೈ.ಕ. ಶಾಸಕರು ಈ ಬಗ್ಗೆ ಜಾಗೃತರಾಗಬೇಕು. ಕಾನೂನು ರಚಿಸಿದ ಸರ್ಕಾರದ ಅಧಿಕಾರಿಗಳೇ ನಿಯಮ ಉಲ್ಲಂಘಿಸುತ್ತಿದ್ದಾರೆ. ಆದರೆ ಅದನ್ನು ತಡೆಯುವ ಗೋಜಿಗೆ ಇಲ್ಲಿನ ಶಾಸಕರು ಗಮನಹರಿಸುತ್ತಿಲ್ಲ ಎಂದು ಟೀಕಿಸಿದರು.
ರಾಜ್ಯ ಸರ್ಕಾರ 2013ರ ಫೆ.23ರಂದು ಆದೇಶ ಹೊರಡಿಸಿ ಹೈ.ಕ.ದಲ್ಲಿ ನಡೆಯುತ್ತಿರುವ ಎಲ್ಲ ನೇಮಕಾತಿಗಳನ್ನು ತಡೆ ಹಿಡಿದಿತ್ತು. ನವೆಂಬರ್ನಲ್ಲಿ ಮತ್ತೊಂದು ಆದೇಶ ಹೊರಡಿಸಿ 2013ರ ಜ.1ರ ನಂತರ ಹೊರಡಿಸಿದ ಎಲ್ಲ ನೇಮಕಾತಿ ಅಧಿಸೂಚನೆ ವಾಪಸ್ ಪಡೆದು ಹೈ.ಕ.ಕ್ಕೆ ಮೀಸಲಾತಿ ನಿಗದಿಗೊಳಿಸಲು ಸೂಚಿಸಿತ್ತು. ಆದರೆ ಸರ್ಕಾರದ ಆದೇಶ ಮೀರಿ ವಿವಿಧ ಇಲಾಖೆಗಳಲ್ಲಿ ಹೈ.ಕ. ಅಭ್ಯರ್ಥಿಗಳ ಮೀಸಲಾತಿ ಹೊರತುಪಡಿಸಿ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಆರೋಪಿಸಿದರು.
ಎಲ್ಲೆಲ್ಲಿ ನೇಮಕಾತಿ?: ಕೆಲ ಇಲಾಖೆಗಳಲ್ಲಿ ತರಾತುರಿಯಲ್ಲಿ ನೇಮಕಾತಿಯನ್ನೂ ಮಾಡಲಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ, ಕೆಎಂಎಫ್ ಬೆಂಗಳೂರು, ಆರೋಗ್ಯ ಇಲಾಖೆ(ಏಡ್ಸ್ ನಿಯಂತ್ರಣ ಸಂಸ್ಥೆ)ಬೆಂಗಳೂರು, ಸೊಸೈಟಿ ಫಾರ್ ಕರ್ನಾಟಕ- ಜರ್ಮನ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ತೋಟಗಾರಿಕೆ ಇಲಾಖೆ ಬಾಗಲಕೋಟೆ ಸೇರಿದಂತೆ ಒಟ್ಟು 698 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ದೂರಿದರು.
ಈ ಬಗ್ಗೆ ಇಲಾಖೆ ಮುಖ್ಯಸ್ಥರನ್ನು ವಿಚಾರಿಸಿದಾಗ ಸಿಎಂ ಸೂಚನೆ ಮೇರೆಗೆ ನೇಮಕಾತಿ ಮಾಡಲಾಗಿದೆ ಎಂದು ತಿಳಿಸಿದ್ದು, ರಾಜ್ಯದ ಸಿಎಂ ಸಿದ್ದರಾಮಯ್ಯ ಅವರೇ ಸಂವಿಧಾನದ ನಿಯಮ ಉಲ್ಲಂಘಿಸಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಸೂಚನೆ ಹಿಂಪಡೆಯಲು ಆಗ್ರಹ: ಸರ್ಕಾರದ ಆದೇಶದಂತೆ 1.1.13ರ ನಂತರ ಹೊರಡಿಸಿದ ಎಲ್ಲ ನೇಮಕಾತಿ ಅಧಿಸೂಚನೆ ಹಿಂಪಡೆದು ಹೈ. ಕ. ಸಂವಿಧಾನಬದ್ಧ ಮೀಸಲಾತಿ ನಿಗದಿಗೊಳಿಸಿ ಮರು ಅಧಿಸೂಚನೆ ಹೊರಡಿಸಲು ಸೂಕ್ತ ಆದೇಶ ನೀಡಬೇಕು. ಯಾವ ಹುದ್ದೆಗಳಿಗೆ ಈಗಾಗಲೇ ನೇಮಕಾತಿ ಆದೇಶ ನೀಡಲಾಗಿದೆ ಅವುಗಳನ್ನೂ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡುತ್ತಿದ್ದು ನಿರ್ಲಕ್ಷ್ಯ ಮುಂದುವರಿಸಿದಲ್ಲಿ ಹಾಗೂ ಈಗಾಗಲೇ ಆಗಿರುವ ತಪ್ಪು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಜನಜಾಗೃತಿ ಮೂಡಿಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಅಂಬಣ್ಣ ಅರೋಲಿಕರ್, ಶಿವುಕುಮಾರ್ ಯಾದವ್ ಸೇರಿ ಅನೇಕರಿದ್ದರು.