ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಾತ್ ಕಚೇರಿ ಜಾಗದಲ್ಲಿ ಜಿಲ್ಲಾಡಳಿತ ಭವನ ಆಗಲಿ

Lingaraj Badiger
Updated On : 13 Jan 2014, 11:19 am

ಕನ್ನಡಪ್ರಭ ವಾರ್ತೆ  ರಾಯಚೂರು  ಜ.12
ಜಿಲ್ಲಾಸ್ಪತ್ರೆ ಆವರಣವನ್ನು ಜಿಲ್ಲೆಗೆ ಮಂಜೂರಾಗುವ ಆರೋಗ್ಯ ಸಂಬಂಧಿ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಬೇಕು. ಜಿಲ್ಲಾಡಳಿತ ಭವನಕ್ಕೆ ನೀಡುವಂತಿಲ್ಲ. ಹಾಗೆಯೇ ಹಾಲಿ ಸಾತ್ ಕಚೇರಿ(ಜಿಲ್ಲಾಧಿಕಾರಿಗಳ ಕಚೇರಿ) ಜಾಗದಲ್ಲಿಯೇ ಅತಿಕ್ರಮಣ ತೆರವುಗೊಳಿಸಿ ಅದೇ ಸ್ಥಳದಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸುವಂತೆ ಜಿಲ್ಲಾಸ್ಪತ್ರೆ ಆವರಣ ಹಾಗೂ ಸಾತ್ ಕಚೇರಿ ಉಳಿಸಿ ಹೋರಾಟ ಸಮಿತಿ ಒತ್ತಾಯಿಸಿದೆ.
ಈ ಕುರಿತು ನಗರದಲ್ಲಿ ಸಮಿತಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮುಖಂಡ ಡಾ. ರಜಾಕ್ ಉಸ್ತಾದ್ ಮಾತನಾಡಿ, ಜಿಲ್ಲಾಸ್ಪತ್ರೆ ಆವರಣವನ್ನು ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಬಳಕೆ ಮಾಡುವುದು ಸೂಕ್ತವಲ್ಲ. ಈಗಾಗಲೇ ಆಸ್ಪತ್ರೆಯ ಜಾಗೆಯು ಆರೋಗ್ಯ ಸಂಬಂಧಿ ವಿವಿಧ ವಿಭಾಗಗಳನ್ನು ಹೊಂದಿದ್ದು, ಮುಂದೆಯೂ ಅಲ್ಲಿಯೇ ಮತ್ತಷ್ಟು ಆರೋಗ್ಯ ಕ್ಷೇತ್ರದ ಅಭಿವೃದ್ಧಿ ವೇಳೆ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ಜಾಗೆ ಒದಗಿಸಬೇಕು ಎಂದು ಆಗ್ರಹಿಸಿದರು.
ಭವಿಷ್ಯದ ಅರಿವಿಲ್ಲ: ಜಿಲ್ಲಾಸ್ಪತ್ರೆಯನ್ನು ಎಂಸಿಐ ಮಾನ್ಯತೆ ಪಡೆಯುವ ಹಿನ್ನೆಲೆಯಲ್ಲಿ ಸರ್ಕಾರ ರಿಮ್ಸ್ ಭೋದಕ ಆಸ್ಪತ್ರೆಯಾಗಿ ಮಾರ್ಪಾಟು ಮಾಡಿದೆ. ಅಷ್ಟೇ ಅಲ್ಲ ಶೀಘ್ರದಲ್ಲಿಯೇ ಈ ಆಸ್ಪತ್ರೆ ಅದರ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಈ ನಂತರದಲ್ಲಿ ಹಳೆ ಕಟ್ಟಡ ತೆರೆವುಗೊಳಿಸಿ ಜಿಲ್ಲಾಡಳಿತ ಭವನ ಹಾಗೂ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ನಿರ್ಮಿಸಲು ಮುಂದಾಗಿರುವುದು ಜನಪ್ರತಿನಿಧಿಗಳಿಗೆ ಭವಿಷ್ಯದ ಆಲೋಚನೆ ಇಲ್ಲ ಎಂಬುದನ್ನು ಸ್ಪಷ್ಟಗೊಳಿಸುತ್ತದೆ ಎಂದು ಟೀಕಿಸಿದರು.
ರಿಮ್ಸ್ ಬೋಧಕ ಆಸ್ಪತ್ರೆಯ ಬೆಳೆವಣಿಗೆಗೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಜಮೀನಿನ ಅವಶ್ಯಕತೆಯಿದೆ. ಈಗಾಗಲೇ ಎಂಸಿಐನ ಷರತ್ತುಗಳಲ್ಲಿ ಹೆಚ್ಚುವರಿ ಜಮೀನಿನ ಪ್ರಸ್ಥಾವನೆಯಿದೆ. ಅದನ್ನು ಪೂರೈಸುವುದು ಜರೂರಿನ ಕಾರ್ಯವಾಗಿದೆಯೇ ಹೊರತು ಅಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣವಲ್ಲ ಎಂದು ತಿಳಿ ಹೇಳಿದರು. ಈಗಾಗಲೇ ಸದ್ಯದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ವಿವಿಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅಂಥವುಗಳನ್ನು ಸ್ಥಳಾಂತರ ಮಾಡಲಾಗುತ್ತದೆಯೇ ಎಂಬ ವಿಚಾರಕ್ಕೆ ಆಡಳಿತ ಪ್ರತಿಕ್ರಿಯಿಸಿಲ್ಲ. ಮುಂದಿನ ದಿನಗಳಲ್ಲಿ ಕೋಟ್ಯಂತರ ರು. ವೆಚ್ಚದ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಜಾರಿಗೆ ಬರುವ ಸಂದರ್ಭದಲ್ಲಿ ಜಮೀನಿ ಅವಶ್ಯಕತೆ ಬೀಳಲಿದ್ದು, ಅಂಥ ಸಂದರ್ಭದಲ್ಲಿ ಈ ಜಾಗೆಯನ್ನು ಬಳಕೆ ಮಾಡಬಹುದೆಂದು ಸಲಹೆ ನೀಡಿದರು.
ಅನುಕೂಲ: ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಯೋಜನೆ ಒಂದೇ ಸ್ಥಳದಲ್ಲಿ ಜಾರಿಗೆ ಬಂದಲ್ಲಿ ಜನತೆಗೆ ಹೆಚ್ಚು ಅನುಕೂಲವಾಗುತ್ತದೆ ಎಂಬುದನ್ನು ಆಡಳಿತ ಅರಿಯಬೇಕಿದೆ. ನಗರವು ಭೌಗೋಳಿಕವಾಗಿ ಜಿಲ್ಲೆಯ ಗಡಿಯಲ್ಲಿದೆ. ಹೀಗಾಗಿ ಜಿಲ್ಲೆಯ ಎಲ್ಲ ತಾಲೂಕುಗಳು ಒಂದೆಡೆಗೆ ಜಿಲ್ಲಾ ಕೇಂದ್ರ ಮತ್ತೊಂದು ತುದಿಗಿದ್ದು, ಇಲ್ಲಿಗೆ ಆಗಮಿಸುವ ಎಲ್ಲರೂ ಜಿಲ್ಲಾಡಳಿತ ಭವನಕ್ಕೆ ಆಗಮಿಸಲು ಸದ್ಯದ ಸಾತ್ ಕಚೇರಿ ಪ್ರದೇಶ ಅನುಕೂಲಕರವಾಗಿದೆ ಎಂದು ಹೇಳಿದರು.
ಹೊಣೆಗಾರಿಕೆ: ಸಾತ್ ಕಚೇರಿಯ ಸುತ್ತಲೂ ಸರ್ಕಾರಕ್ಕೆ ಸೇರಿದ 7 ಎಕರೆ ಜಾಗವಿದೆ. ಅದರಲ್ಲಿ ಒತ್ತುವರಿಯಾಗಿದ್ದಲ್ಲಿ ಅಂಥ ಒತ್ತುವರಿಯನ್ನು ಪರಿಶೀಲಿಸಿ ತೆರವುಗೊಳಿಸುವ ಮೂಲಕ ಅಲ್ಲಿಯೇ ಜಿಲ್ಲಾಡಳಿತ ಭವನ ನಿರ್ಮಿಸಬಹುದಾಗಿದೆ.ನಗರದ ಸಾತ್ ಕಚೇರಿಗೆ ಐತಿಹಾಸಿಕ ಹಿನ್ನೆಲೆಯಿದೆ. ಅಂಥ ಸ್ಮಾರಕ ರಕ್ಷಣೆ ಎಲ್ಲರ ಹೊಣೆಯಾಗಿದೆ. ಜಿಲ್ಲಾಡಳಿತಕ್ಕೆ ಬೇಕಿರುವ ಹೆಚ್ಚುವರಿ ಕಟ್ಟಡಗಳನ್ನು ಸಾತ್ ಕಚೇರಿ ಸುತ್ತಲಿನ ಖಾಲಿ ಜಾಗದಲ್ಲಿ ನಿರ್ಮಿಸಬಹುದಾಗಿದೆ ಎಂದು ಸಲಹೆ ನೀಡಿದರು. ಈ ಹಿನ್ನೆಲೆಯಲ್ಲಿ ಈಚೆಗೆ ಸಭೆ ನಡೆಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ. ಜ. 16ರಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಹಾಗೆಯೇ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.  ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ರವೀಂದ್ರ ಜಲ್ದಾರ್, ಡಾ. ಚಂದ್ರಗಿರೀಶ್, ಶಿವಕುಮಾರ ಯಾದವ್ ಸೇರಿದಂತೆ ಅನೇಕರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement