ಕ್ರೀಡೆಯಿಂದ ಆತ್ಮಸ್ಥೈರ್ಯ ವೃದ್ಧಿ
ಮುದಗಲ್: ಪಾಠದ ಜೊತೆಗೆ ವಿದ್ಯಾರ್ಥಿಗಳು ಆಟೋಟದಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಜೊತೆಗೆ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಲಿಂಗಸ್ಗೂರಿನ ಪೊಲೀಸ್ ಉಪ ವಿಭಾಗಾಧಿಕಾರಿ ಅನಿತಾ ಹದ್ದಣ್ಣನವರ ಹೇಳಿದರು. ಪಟ್ಟಣ ಸಮೀಪದ ಕನ್ನಾಪುರಹಟ್ಟಿ ಜವಾಹರ ನವೋದಯ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟು ಸೋಲು-ಗೆಲವನ್ನು ಸಮಾನವಾಗಿ ಸ್ವೀಕರಿಸಿ ನಿರ್ಣಾಯಕರ ತೀರ್ಪಿಗೆ ಗೌರವಿಸಬೇಕೆಂದರು. ಪಾಲಕರ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಲಿಂಗಪ್ಪ ಫರಂಗಿ, ಮುದಗಲ್ ಠಾಣೆಯ ಪಿಎಸ್ಐ ಸಂಗಮೇಶ ಶಿವಯೋಗಿ, ಸ್ಥಳೀಯ ವಿದ್ಯಾಲಯದ ಪ್ರಾಚಾರ್ಯ ಎ.ಕೆ.ಸಚೇಂದ್ರನ್ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾಲಯ ಶಿಕ್ಷಕರು, ಪಾಲಕ ಪ್ರತಿನಿಧಿಗಳ ಸಂಘದ ಸದಸ್ಯರಿದ್ದರು.