ಶರಣರ ಆದರ್ಶ ಪಾಲನೆಯಿಂದ ಜೀವನ ಪಾವನ: ಪಾಟೀಲ್
ಕ.ಪ್ರ. ವಾರ್ತೆ ಲಿಂಗಸ್ಗೂರು ಜ.13
12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಾಮಾಜ ಸುಧಾರಣೆಗೆ ಶ್ರಮಿಸಿದ ಶರಣರ ತತ್ವಾದರ್ಶ ಪಾಲನೆಯಿಂದ ಜೀವನ ಪಾವನವಾಗಲಿದೆ ಎಂದು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಶಾಲೆಯಲ್ಲಿ ಸೋಮವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದಿಂದ ಆಚರಿಸುವ ಮಹಾನ್ ವ್ಯಕ್ತಿಗಳ ಆಚರಣೆಗಳಿಗೆ ಕೆಲವರಿಂದ ಟೀಕೆಗಳು ಬರುತ್ತಿವೆ. ಆದರೆ ಸಮಾಜದ ಅಂಕುಡೊಂಕು ತಿದ್ದಿ ಉತ್ತಮ ಜೀವನ ಸಾಗಿಸಲು ಶರಣರ ಆದರ್ಶ, ಮಾರ್ಗದರ್ಶನ ಜನರಿಗೆ ತಲುಪಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಶರಣರು ಯಾವುದೇ ಒಂದು ಜಾತಿಗೆ ಸೀಮಿತವಾದವರಲ್ಲ. ವರ್ಷದಲ್ಲಿ ಒಂದು ಬಾರಿಯಾದರೂ ಅವರನ್ನು ನೆನೆಯಲು ಅವಕಾಶ ಕಲ್ಪಿಸಿದಂತಾಗಲಿದೆ ಎಂದು ತಿಳಿಸಿದರು.
ಸಹಾಯಕ ಆಯುಕ್ತ ಟಿ. ಯೋಗೇಶ್ ಮಾತನಾಡಿ, ಸರ್ಕಾರ ಪ್ರಥಮ ಬಾರಿಗೆ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆಗೆ ನಿರ್ಧಾರ ಕೈಗೊಂಡಿದೆ. 12ನೇ ಶತಮಾನದಲ್ಲಿ ಬಸವಾದಿ ಶರಣರದ್ದು ಒಂದೇ ಒಂದು ಧ್ಯೇಯವಾಗಿತ್ತು. ಅದು ಸಮಾಜ ಸುಧಾರಣೆ. ಶಿವಯೋಗಿ ಸಿದ್ದರಾಮೇಶ್ವರರು ನಾಡಿನಾದ್ಯಂತ ಕೆರೆ, ಕಟ್ಟೆ ಕಟ್ಟುವುದು, ಅನ್ನಛತ್ರ, ದಾನ ಸೇರಿದಂತೆ ಅನೇಕ ಜನೋಪಯೋಗಿ ಕಾರ್ಯಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಮಾನಪ್ಪ ವಜ್ಜಲ್, ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ, ತಾಪಂ ಅಧ್ಯಕ್ಷೆ ಬಸಮ್ಮ ಪರಮೇಶ ಯಾದವ್, ತಹಸೀಲ್ದಾರ್ ಜಿ.ಎಸ್. ಮಹಾಜನ್, ಉಪ ತಹಸೀಲ್ದಾರ್ ಖಾಜಾ ಹುಸೇನ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಸೋಮಶೇಖರ ಐದನಾಳ, ಭೋವಿ ವಡ್ಡರ್ ಸಮಾಜದ ಅಧ್ಯಕ್ಷ ಶರಣಪ್ಪ ಮುದಗಲ್ ಇದ್ದರು.
ವಿಸಿಬಿ ಕಾಲೇಜು ಆಡಳಿತಾಧಿಕಾರಿ ಸಿ. ಶರಣಪ್ಪ ಅವರು ಶಿವಯೋಗಿ ಸಿದ್ದರಾಮೇಶ್ವರರ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಿಂದ ಪ್ರಮುಖ ಬೀದಿಗಳಲ್ಲಿ ಸಂಗೀತ ವಾದ್ಯಗಳ ಮೂಲಕ ಸಿದ್ದರಾಮೇಶ್ವರರ ಮೆರವಣಿಗೆ ನಡೆಸಲಾಯಿತು.