ತರಗತಿ ಬಹಿಷ್ಕರಿಸಿ 27ರಿಂದ ಸಿಎಂ ಮನೆ ಎದುರು ಧರಣಿ
ಗುಲ್ಬರ್ಗ: ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಕಡೆಗಣಿಸಿದ ರಾಜ್ಯ ಸರ್ಕಾರದ ವಿರುದ್ಧ ಜ.27ರಿಂದ ರಾಜ್ಯಾದ್ಯಂತ ತರಗತಿಗಳನ್ನು ಬಹಿಷ್ಕರಿಸಿ ಮುಖ್ಯಮಂತ್ರಿ ಮನೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಕರ್ನಾಟಕ ರಾಜ್ಯ ಸಮಿತಿ ನಿರ್ಧರಿಸಿದೆ.
ರಾಜ್ಯಾದ್ಯಂತ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಂಗ್ರೆಸ್ನ ರಾಜ್ಯ ಸರ್ಕಾರವು ಕೂಡ ಅಮಾನವೀಯವಾಗಿ ವಂಚಿಸಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಜಗಪ್ಪ ತಳವಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಸಂಯುಕ್ತ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸರ್ಕಾರದ ಅಮಾನವೀಯ ನೀತಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 10,600ಕ್ಕಿಂತ ಹೆಚ್ಚಿರುವ ಅತಿಥಿ ಉಪನ್ಯಾಸಕರು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ದುಡಿಯುತ್ತಿರುವ ಇವರನ್ನು ಅತ್ಯಂತ ಅಮಾನವೀಯವಾಗಿ ಕಂಡು ಕಡೆಗಣಿಸಲಾಗಿದೆ. ಬೇಡಿಕೆಗಳನ್ನು ಈಡೇರಿಸುವ ಬದಲಿಗೆ ದಿನಕ್ಕೊಂದು ನೀತಿಗಳನ್ನು ಜಾರಿಗೆ ತಂದು ಅತಿಥಿ ಉಪನ್ಯಾಸಕರಿಗೆ ಹಂತ ಹಂತವಾಗಿ ಕೆಲಸ ಇಲ್ಲದಂತೆ ರಾಜ್ಯ ಸರ್ಕಾರ ಮಾಡುತ್ತಿದೆ.
ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಿಂದಲೇ ರಾಜ್ಯಮಟ್ಟದ ಸಮಾವೇಶಗಳು, ಮತ್ತು ಹಲವಾರು ಬಾರಿ ಪ್ರತಿಭಟನೆಗಳನ್ನು ಅತಿಥಿ ಉಪನ್ಯಾಸಕರ ಸಂಘದಿಂದ ನಡೆಸಲಾಗಿತ್ತು. ಇದರಿಂದಾಗಿ ಪ್ರತಿಭಟನೆಯ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಮಾತುಕತೆ ನಡೆಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ ಪ್ರಸಕ್ತ ವರ್ಷ ಶೈಕ್ಷಣಿಕ ವರ್ಷ ಮುಗಿಯುವ ಹಂತದಲ್ಲಿದ್ದರೂ ಬೇಡಿಕೆ ಈಡೇರಿಸುವ ಬದಲಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈಗಿರುವ ಎಲ್ಲ ಅತಿಥಿ ಉಪನ್ಯಾಸಕರನ್ನು ಕೈಬಿಡುವ ಹುನ್ನಾರ ನಡೆಸಲಾಗುತ್ತಿದೆ.
ಸಮಸ್ಯೆಗೆ ಸ್ಪಂದಿಸದಿದ್ರೆ ರಾಜಿನಾಮೆ ನೀಡಲಿ: ಉನ್ನತ ಶಿಕ್ಷಣ ಸಚಿವ ಆರ್.ದೇಶಪಾಂಡೆಯವರು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುತ್ತಿದ್ದೇವೆ ಎಂದು ಮಾಧ್ಯಮಗಳ ಮುಂದೆ ಸುಳ್ಳು ಹೇಳುತ್ತಾ ಕಾಲಕಳೆಯುತ್ತಿದ್ದಾರೆ. ತಾಳ್ಮೆಯಿಂದ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸದಿದ್ದರೆ ಉನ್ನತ ಶಿಕ್ಷಣ ಸಚಿವ ಸ್ಥಾನಕ್ಕೆ ಅವರು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ರಾಜ್ಯ ಸರ್ಕಾರವೆಂದು ಈಗಾಗಲೇ 6 ತಿಂಗಳು ಕಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಣ ಕಿವುಡತನವನ್ನು ಪ್ರದರ್ಶಿಸುತ್ತಿದ್ದಾರೆ. ಆರ್ಥಿಕ ನೀತಿಗಳ ವಿಚಾರದಲ್ಲಿ ಕಳೆದ ಬಿಜೆಪಿಗೂ ನಮಗೂ ಯಾವುದೇ ವ್ಯತ್ಯಾಸವಿಲ್ಲವೆಂದು ಈಗಾಗಲೇ ಸಾಬೀತು ಪಡಿಸಿದ್ದಾರೆ. ಅತಿಥಿ ಉಪನ್ಯಾಸಕರ ಗಂಭೀರ ಸಮಸ್ಯೆಳ ಬಗ್ಗೆ ಅರಿವಿದ್ದರೂ ಇಲ್ಲದಂತೆ ಮರೆಮಾಚುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
5 ಲಕ್ಷ ಜನತೆಗೆ ಉದ್ಯೋಗ ಭದ್ರತೆಯಿಲ್ಲ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರ ಗುತ್ತಿಗೆ ಹಾಗೂ ಇನ್ನಿತರ ಹೆಸರುಗಳಲ್ಲಿ ದುಡಿಯುತ್ತಿರುವ 5 ಲಕ್ಷ ಯವಜನತಗೆ ಉದ್ಯೋಗ ಭದ್ರತೆ ಒದಗಿಸುತ್ತಿಲ್ಲ. ಬಿಜೆಪಿಯಂತೆ ಜಾಗತಿಕ ಬಂಡವಾಳ ಹೂಡಿಕೆ ಹೆಸರಲ್ಲಿ ಇನ್ನಷ್ಟು ಉದ್ಯೋಗ ನಾಶ ಮಾಡುವಂತಹ ನೀತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತರಲು ಹೊರಟಿದ್ದಾರೆ. ಇಂತಹ ನೀತಿಗಳಿಂದಲೇ 10-15 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದವರು ಬೀದಿಗೆ ಬೀಳುವಂತಾಗಿದೆ.
ಇಂತಹ ಅಮಾನವೀಯ ರಾಜ್ಯ ಸರ್ಕಾರದ ವರ್ತನೆಯನ್ನು ವಿರೋಧಿಸಿ, ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ಹೋರಾಟ ಹಾದಿಯನ್ನು ಹಿಡಿಯಲಾಗಿದೆ.
ಬೇಡಿಕೆಗಳು..: ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷದ ಸಾಲಿನಲ್ಲಿರುವ ಅತಿಥಿ ಉಪನ್ಯಾಸಕರನ್ನೇ ಮುಂದುವರೆಸುವಂತೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡು ಲಿಖಿತ ಆದೇಶ ಹೊರಡಿಸಬೇಕು. ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತುತ ತ್ರಿಪುರ ರಾಜ್ಯಗಳಂತೆ ಸೇವಾ ಭದ್ರತೆ ಒದಗಿಸಿ ಯುಜಿಸಿಯ ನಿಯಮದಂತೆ ತಿಂಗಳಿಗೆ 25 ಸಾವಿರ ವೇತನ ನಿಗದಿಗೊಳಿಸಬೇಕು. ತಿಂಗಳ ಮೊದಲ ವಾರದಲ್ಲೇ ವೇತನ ಬಿಡುಗಡೆಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಗಂಭೀರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿಲ್ಲ. ಆದ್ದರಿಂದ ಅನ್ಯ ಮಾರ್ಗವಿಲ್ಲದೆ ಜ.27ರಂದು ರಾಜ್ಯಾದ್ಯಂತ ತರಗತಿಗಳನ್ನು ಬಹಿಷ್ಕರಿಸಿ ಬೆಂಗಳೂರಿನಲ್ಲಿ ಸಿಎಂ ಮನೆ ಎದರು ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.