ನಗರ- ಪಟ್ಟಣ ಅಭಿವೃದ್ಧಿಗೆ ಕೇಂದ್ರದ ಅನುದಾನ
ಕ.ಪ್ರ. ವಾರ್ತೆ ಗುಲ್ಬರ್ಗ ಜ.14
ನಾರಾಯಣಪುರ ನಾಲೆ ಆಧುನೀಕರಣಕ್ಕೆಂದೇ ಎಐಬಿಪಿ ಯೋಜನೆಯಡಿ ಕೇಂದ್ರದಿಂದ 550 ಕೋಟಿ ಹಣ ಹರಿದು ಬಂದ ಬೆನ್ನಲ್ಲೇ ಇದೀಗ ಗುಲ್ಬರ್ಗ ನಗರ- ಪಟ್ಟಣಗಳ ಚರಂಡಿ- ರಸ್ತೆ ಸುಧಾರಣೆಗೆ ಬಹುಕೋಟಿ ಹಣ ಒಲಿದು ಬರುತ್ತಿದೆ.
ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿನ ಹದಗೆಟ್ಟ ಚರಂಡಿ, ಗಬ್ಬೆದ್ದಿರುವ ರಸ್ತೆಗಳಿಗೆ ಹೊಸರೂಪ ನೀಡುವ ಗುರಿಯೊಂದಿಗೆ ಕೇಂದ್ರ ಸರ್ಕಾರ ರೂಪಿಸಿರುವ ಸಣ್ಣ- ಮಧ್ಯಮ ಪಟ್ಟಣಗಳ ಸರ್ವಾಂಗೀಣ ಅಭಿವೃದ್ಧಿ ಯೋಜನೆ(ಯುಐಡಿಎಸ್ಎಸ್ಎಂಟಿ) ಅಡಿಯಲ್ಲಿ ಗುಲ್ಬರ್ಗ ಮಹಾನಗರ ಹಾಗೂ ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ಜ.6ರಂದು ಕೇಂದ್ರದ ನಗರಾಭಿವೃದ್ಧಿ ಇಲಾಖೆ 689.47 ಕೋಟಿ ಅನುದಾನ ನೀಡಲು ತಾತ್ವಿಕ ಒಪ್ಪಿಗೆ ನೀಡಿದೆ.
4 ಹಂತಗಳಲ್ಲಿ ಹಣ ಬಿಡುಗಡೆ: ಈ ಯೋಜನೆಯಡಿ ವೆಚ್ಚ ಮಾಡಲಾಗುವ ಅನುದಾನದಲ್ಲಿ ಕೇಂದ್ರದ ಪಾಲು ಶೇ.80, ರಾಜ್ಯದ ಪಾಲು ಶೇ.20. ಯೋಜನೆಯ ವಿವರವಾದಂತಹ ವರದಿ ಸಿದ್ಧಪಡಿಸಿ 4 ಹಂತಗಳಲ್ಲಿ ಹಣ ಮಂಜೂರು ಮಾಡಿಸಿಕೊಳ್ಳಬೇಕು. ಇದಕ್ಕಾಗಿ ರಾಜ್ಯ ಸರ್ಕಾರದ ನಗರಾಭಿವೃದ್ಧಿ, ಪೌರಾಡಳಿತ ಸಚಿವಾಲಯ ಕಾರ್ಯತತ್ಪರವಾಗಬೇಕು. ಜಿಲ್ಲಾ ಹಂತದಲ್ಲಿ ಯೋಜನೆಯ ವಿವರ ವರದಿ ಸಿದ್ಧವಾಗಬೇಕು.
ಈ ಮಹತ್ವದ ವಿಷಯವನ್ನು ಸುಲ್ತಾನಪುರ ರೇಲ್ವೆ ನಿಲ್ದಾಣ, ಗೂಡ್ಸ್ ಕಾಮಗಾರಿಗೆ ಶಂಕುಸ್ಥಾಪನೆಯ ಸಮಾರಂಭದಲ್ಲಿ ಪ್ರಕಟಿಸಿದ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಕೇಂದ್ರದಿಂದ ಬರುತ್ತಿರುವ ಅಭಿವೃದ್ಧಿ ಅನುದಾನ ಸದ್ವಿನಿಯೋಗಿಸಿಕೊಳ್ಳುವಂತೆ ಅಧಿಕಾರಿಗಳು, ಜನನಾಯಕರಿಗೆ ತಿಳಿಸಿದರು.
ಎಷ್ಟೆಷ್ಟು ಬಿಡುಗಡೆ?: ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯವು ಮಂಜೂರು ಮಾಡಿರುವ ಈ ಅನುದಾನವನ್ನು ಜಿಲ್ಲೆಗಳ ರಸ್ತೆ, ಒಳಚರಂಡಿ ಮತ್ತು ಪಾದಚಾರಿ ರಸ್ತೆಗಳ ನಿರ್ಮಾಣಕ್ಕಾಗಿ ವಿನಯೋಗಿಸಬಹುದಾಗಿದೆ. ಈ ಅನುದಾನವನ್ನು 88 ಕೋಟಿ, 67 ಕೋಟಿ, 79 ಕೋಟಿ ಹಾಗೂ 95 ಕೋಟಿಯಂತೆ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ.
3 ತಾಲೂಕು ಕಡೆಗಣನೆ?: ಈ ಅನುದಾನದ ಪೈಕಿ ಪೈಕಿ ಶಹಾಬಾದ್ಗೆ 28 ಕೋಟಿ, ವಾಡಿ 149 ಕೋಟಿ, ಜೇವರ್ಗಿ 26 ಕೋಟಿ, ಸೇಡಂ 22 ಕೋಟಿ ಹಾಗೂ ಸೇಡಂ ಪಟ್ಟಣ ನೀರು ಸರಬರಾಜಿಗೆ 24.64 ಕೋಟಿ ಸೇರಿದಂತೆ ಎಲ್ಲೆಡೆ ಅನುದಾನ ಬಿಡುಗಡೆಯಾಗಲಿದೆ ಎಂದರು. ಖರ್ಗೆಯವರು ಈ ತಾಲೂಕುವಾರು ಹಾಗೂ ನಗರಸಭೆ, ಪುರಸಭೆಗಳ ವಾರು ಮಾಹಿತಿ ನೀಡುವಾಗ ಅಫಜಲ್ಪುರ ಹಾಗೂ ಆಳಂದ, ಚಿಂಚೋಳಿಗೆ ಅನುದಾನ ಬಿಡುಗಡೆಯಾಗಿರುವ ಬಗ್ಗೆ ಮಾಹಿತಿ ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಲಿಲ್ಲ.
ಕಲಂ 371(ಜೆ) ಸಿಹಿ ಫಲ ಮೊದಲು ಪಡೆಯೋಣ...
ಕಲಂ 371(ಜೆ) ಅಡಿಯಲ್ಲಿ ಏನೆಲ್ಲಾ ಉಪಯೋಗವಿದೆಯೋ ಮೊದಲು ಅದನ್ನು ಪಡೆಯೋಣ. ನಂತರ ಅದರಲ್ಲಿನ ಕೊರತೆಗಳು, ಅಲ್ಲಿನ ತೊಂದರೆಗಳನ್ನೆಲ್ಲ ಅಧ್ಯಯನ ಮಾಡಿ ಅವುಗಳನ್ನು ಸರಿಪಡಿಸುವುದಕ್ಕೆ ಮುಂದಾಗೋಣ ಎಂದರು ಖರ್ಗೆ. ಕಲಂ 371(ಜೆ) ಸಂವಿಧಾನದ ತಿದ್ದುಪಡಿಯಿಂದ ಹೈ- ಕ ಭಾಗದ 6 ಜಿಲ್ಲೆಗಳಿಗೆ ಅನುಕೂಲವಂತೂ ಇದೆ. ಕೆಲವರು ಅನುಕೂಲವಿಲ್ಲ ಎಂದೂ ಹೇಳುತ್ತಾರೆ. ಅವುಗಳ ನಿಯಮ ರಚನೆಯಾಗಿ ಅದು ಅನುಷ್ಠಾನಗೊಂಡಾಗ ಏನೆಲ್ಲಾ ನಡೆಯಲಿದೆ ಎಂಬುದನ್ನು ಅಧ್ಯಯನ ಮಾಡೋಣ. ಅದ್ಯಾವುದನ್ನು ಮಾಡದೆ ಟೀಕೆ ಮಾಡುವುದು ಸರಿಯಲ್ಲ ಎಂದರು.