ಯುವ ಸಪ್ತಾಹ ಕಾರ್ಯಕ್ರಮ
ಗುಲ್ಬರ್ಗ: ಜಿಲ್ಲಾ ಪಂಚಾಯ್ತಿ, ಯುವಜನ ಸೇವಾ ಮತ್ತು ಕ್ರೀಡಾಇಲಾಖೆ ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮ ಸಹಯೋಗದೊಂದಿಗೆ ತಾಡತೇಗನೂರಿನ ವಿವೇಕಾನಂದ ವಿದ್ಯಾಪೀಠದಲ್ಲಿ ವಿವೇಕಾನಂದ ಜಯಂತಿ ನಿಮಿತ್ತ ಯುವ ಸಪ್ತಾಹ ಕಾರ್ಯಕ್ರಮ ನಡೆಯಿತು.
ಜಿಪಂ ಸಿಇಒ ಟಿಎಚ್ಎಂ ಕುಮಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಹದಗೆಡುತ್ತಿರುವ ಇಂದಿನ ಸಮಾಜಕ್ಕೆ ವಿವೇಕಾನಂದರ ತತ್ವಾದರ್ಶ ಅಗತ್ಯ ಎಂದರು. ಬೆಂಗಳೂರಿನ ರಮೇಶ ಉಮರಾಣಿ ಮಾತನಾಡಿ, ವಿದ್ಯಾರ್ಥಿಗಳ ಜೀವನ ತಪಸ್ಸು ಇದ್ದಂತೆ. ವಿದ್ಯಾರ್ಥಿ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಇಂದಿನ ವಿದ್ಯಾರ್ಥಿಗಳಿಗೆ ವಿವೇಕಾನಂದರು ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳು ಕೇವಲ ಅಂಕ ಪಡೆದರೆ ಸಾಲದು. ಉತ್ತಮ ಸಂಸ್ಕಾರ ಪಡೆದುಕೊಳ್ಳಬೇಕೆಂದು ಹೇಳಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಮಹೇಶ್ವರಾನಂದಜಿ ಸಾನಿದ್ಯವಹಿಸಿ ಆಶೀರ್ವಚನ ನೀಡಿದರು. ಜಿಪಂ ಉಪಾಧ್ಯಕ್ಷೆ ಅನಿತಾ ಪವನ ಕುಮಾರ ವಳಕೇರಿ, ಜಿಪಂ ಶಿಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಸಾವಳೇಶ್ವರ, ಪವನಕುಮಾರ ವಳಕೇರಿ, ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆ ಅಧಿಕಾರಿ ಯೋಗೇಂದ್ರ ದೇಸಾಯಿ, ವಿದ್ಯಾಪೀಠದ ಮುಖ್ಯೋಪಾಧ್ಯಯ ಅಶೋಕ ಇದ್ದರು.
ಡೊಂಗರಗಾಂವ್ ಗ್ರಾಪಂ.ನಲ್ಲಿ : ಡೊಂಗರಗಾಂವ್ ಗ್ರಾಪಂ ಕಾರ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಆಟದ ಮೈದಾನ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಜಿಪಂ ಸದಸ್ಯ ಬಸವರಾಜ ಮಾಲಿಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಉಪಾಧ್ಯಕ್ಷ ತಾರಾಬಾಯಿ ಬಿ. ಮರಗುತ್ತಿ, ಗ್ರಾಪಂ ಅಧ್ಯಕ್ಷ ನಾಗಮ್ಮ ಡಿ, ಸಿದ್ದಮ್ಮ ಜಿ.ಸಿಂಗೆ, ಮಾಜಿ ಅಧ್ಯಕ್ಷ ಅನೀಲಕುಮಾರ ಬೆಳಕೇರಿ, ಶಿವಾನಂದ ಇದ್ದರು.