ಶಿಲುಬೆ ಕಟ್ಟೆ ಧ್ವಂಸ ಪ್ರಕರಣ; ಖಂಡನೆ
ಕ.ಪ್ರ. ವಾರ್ತೆ ರಾಯಚೂರು ಜ.14
ಯಾದಗಿರಿ ತಾಲೂಕಿನ ಠಾಣಾಗುಂದಿ ಗ್ರಾಮದ ಹೊರವಲಯದಲ್ಲಿ ಇತ್ತೀಚೆಗೆ ಕ್ರೈಸ್ತರ ಶಿಲುಬೆ ಕಟ್ಟೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ ಘಟನೆಯನ್ನು ಖಂಡಿಸಿ ನಗರದಲ್ಲಿ ಇತ್ತೀಚೆಗೆ ಕ್ರೈಸ್ತರ ಹಿತರಕ್ಷಣಾ ಸಮಿತಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಮನವಿ ಸಲ್ಲಿಸಿ, ಕ್ರೈಸ್ತ ಸಮುದಾಯವು ಈಸ್ಟರ್ ಹಬ್ಬದ ಆಚರಣೆ ಸಂದರ್ಭ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಅಡಚಣೆ ಉಂಟು ಮಾಡುವ ಉದ್ದೇಶದಿಂದಲೇ ಇಂಥ ಕೃತ್ಯ ಎಸಗಲಾಗಿದೆ ಎಂದು ಸಮಿತಿ ಆರೋಪಿಸಿದೆ.
ಕೂಡಲೇ ಶಿಲುಬೆ ಕಟ್ಟೆಯನ್ನು ಧ್ವಂಸಗೊಳಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿದ ಸಂಘಟನೆಯವರು, ಬೆಂಗಳೂರಿನಲ್ಲಿ ಕ್ರೈಸ್ತ್ ಪಾದ್ರಿ ಬೆನ್ನಿಹಿನ್ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಲು ಪ್ರಮೋದ್ ಮುತಾಲಿಕ್ಗೆ ಹಕ್ಕಿಲ್ಲ ಎಂದು ಎಚ್ಚರಿಸಿದರು.
ದೇಶವು ಜಾತ್ಯತೀತ ವ್ಯವಸ್ಥೆಯನ್ನು ಹೊಂದಿದೆ. ಸಾಮೂಹಿಕ ಪ್ರಾರ್ಥನೆಯನ್ನು ತಡೆಯುವ ಕಾರ್ಯ ಯಾರೂ ಮಾಡುವಂತಿಲ್ಲ. ಅಂಥಹುದರಲ್ಲಿ ಪ್ರಮೋದ್ ಮುತಾಲಿಕ್ನಂಥವರು ಸೌಹಾರ್ದತೆಗೆ ಧಕ್ಕೆ ಬರುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಮತೀಯ ದ್ವೇಷದ ಭಾವನೆ ಬಿತ್ತುವ ಕಾರ್ಯವನ್ನು ಮಾಡುವುದು ಕ್ರೈಸ್ತ ಸಮುದಾಯಕ್ಕೆ ಬೇಸರ ತಂದಿದೆ ಎಂದು ತಿಳಿಸಿದರು.
ಬೆನ್ನಿಹಿನ್ ಪ್ರಾರ್ಥನೆ ಕಾರ್ಯಕ್ರಮಕ್ಕೆ ವಿರೋಧಿಸುವವರು ಕಾರ್ಯಕ್ರಮ ಸಂದರ್ಭ ಹಿಂಸಾಚಾರಕ್ಕೆ ಮುಂದಾಗದಂತೆ ಶ್ರೀರಾಮ ಸೇನೆ ಮತ್ತಿತರೆ ಹಿಂದೂ ಸಂಘಟನೆಗಳನ್ನು ತಡೆಯುವತ್ತ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಎ. ಸಂಸೋನ್, ಜರ್ನಸ್ ಜೇಮ್ಸ್, ವರಪ್ರಸಾದ್, ಸಿ. ಮಾರ್ಕ, ಅನೂಕ್ ರಾಜ್, ಸಾಲೋಮನ್, ಜೇಮ್ಸ್ ಜೈಕುಮಾರ್, ಜೋಸೆಫ್, ಎಸ್. ಜೇಮ್ಸ್ ಸೇರಿದಂತೆ ಅನೇಕರಿದ್ದರು.