ಸಂಭ್ರಮದ ನಡುವೆ ಸಂಕ್ರಾಂತಿ
ಕ.ಪ್ರ. ವಾರ್ತೆ ಲಿಂಗಸ್ಗೂರು ಜ.14
ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ದಿನವೇ ಮಕರ ಸಂಕ್ರಮಣ ಎಂದು ಹಾಗೂ ಸಂಕ್ರಾಂತಿ ಹಬ್ಬವನ್ನು ಸುಗ್ಗಿಯ ಹಬ್ಬವೆಂದು ಕರೆಯಲಾಗುತ್ತದೆ. ತಾಲೂಕಿನಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸುಗ್ಗಿಯ ಹಬ್ಬ: ಮಕರ ಸಂಕ್ರಾಂತಿ ನಾಡಿಗೆ ಸುಗ್ಗಿಯನ್ನು ತರುವ ಸಂಭ್ರಮದ ಹಬ್ಬ. ರೈತಾಪಿ ವರ್ಗ ಈ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. ರೈತರು ಬೆಳೆದ ಬೆಳೆಯ ಫಸಲು, ದವಸ ಧಾನ್ಯಗಳನ್ನು ಪೂಜಿಸಿ, ರೈತರ ಜೀವಾಳ ಎತ್ತು, ಆಕಳು ಸೇರಿದಂತೆ ಪಶುಗಳನ್ನು ಅಲಂಕರಿಸಿ ಪೂಜಿಸಲಾಗುತ್ತದೆ.
ಮಕರ ಸಂಕ್ರಮಣ ಹಬ್ಬವನ್ನು ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳ ಜನತೆ ಪುಣ್ಯಕ್ಷೇತ್ರ, ನದಿ, ಪುಷ್ಕರಣಿ, ಸರೋವರಗಳಲ್ಲಿ ಪುಣ್ಯಸ್ನಾನ ಮಾಡುವುದರಿಂದ ಪಾಪ ನಾಶವಾಗುತ್ತದೆಂಬ ನಂಬಿಕೆಯಂತೆ ತಾಲೂಕಿನ ಪ್ರಮುಖ ನದಿ ಕೃಷ್ಣಾ ತೀರಗಳಾದ ನಾರಾಯಣಪುರ ಜಲಾಶಯ, ಜಲದುರ್ಗ, ಟಣಮನಕಲ್, ತಿಂಥಿಣಿ ಬ್ರಿಜ್ ಸೇರಿದಂತೆ ಪುಣ್ಯ ಕ್ಷೇತ್ರಗಳಾದ ಸುಕ್ಷೇತ್ರ ಅಮರೇಶ್ವರ, ತಿಂಥಿಣಿ ಮೌನೇಶ್ವರ, ರಾಮತೀರ್ಥ ಮೊದಲಾದ ಸ್ಥಳಗಳಿಗೆ ತೆರಳಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದರು. ನಂತರ ತಾವು ತಂದ ಎಳ್ಳು, ಶೇಂಗಾ ಹೋಳಿಗೆ, ಎಳ್ಳು ಹಚ್ಚಿದ ಸಜ್ಜೆರೊಟ್ಟಿ, ಬಗೆ ಬಗೆಯ ತರಕಾರಿಗಳಿಂದ ಮಿಶ್ರಿತ ಭರ್ತ, ಬೆಣ್ಣೆ, ಚಿತ್ರಾನ್ನ, ಮೊಸರನ್ನ ಸೇರಿದಂತೆ ಮೃಷ್ಟಾನ್ನ ಭೋಜನ ಕುಟುಂಬ ಸಮೇತ ಸವಿದು ತಮ್ಮ ಮನೆಗಳಿಗೆ ತೆರಳುವ ದೃಶ್ಯ ಕಂಡು ಬಂದಿತು.
ಎಳ್ಳು-ಬೆಲ್ಲ ಸಂಭ್ರಮ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹೊಸ ಬಟ್ಟೆಗಳನ್ನು ಧರಿಸಿ ಮಂಗಳವಾರ ಸಂಜೆ ಮನೆ ಮನೆಗೆ ತೆರಳಿ ಎಳ್ಳು- ಬೆಲ್ಲ ಹಂಚಿ ಎಳ್ಳು- ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯ ಕಂಡು ಬಂದಿತು.