371ನೇ ಕಲಂ: 19ಕ್ಕೆ ಮಹತ್ವದ ಸಭೆ
ರಾಯಚೂರು: ಸಂವಿಧಾನದ 371ನೇ ಕಲಂ (ಜೆ) ಅಡಿ ಹೈ.ಕ. ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿದ್ದು, ಇದರಡಿ ಹೈದ್ರಾಬಾದ್- ಕರ್ನಾಟಕದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವ ನಿಟ್ಟಿನಲ್ಲಿ ಜ.19ರಂದು ನಗರದಲ್ಲಿ ಮಹತ್ವದ ಸಭೆ ಕರೆಯಲಾಗಿದೆ ಎಂದು ಜನಸಂಗ್ರಾಮ ಪರಿಷತ್ ತಿಳಿಸಿದೆ.
ಈ ಕುರಿತು ಸಂಘಟನೆಯ ಪ್ರಮುಖರಾದ ರಾಘವೇಂದ್ರ ಕುಷ್ಟಗಿ, ಡಾ.ರಜಾಕ್ ಉಸ್ತಾದ್ ಪ್ರಕಟಣೆ ನೀಡಿ, ಸರ್ಕಾರ ರಚಿಸಿದ್ದ ಎಚ್.ಕೆ. ಪಾಟೀಲ್ ನೇತೃತ್ವದ ಉಪಸಮಿತಿ ಸೂಚಿಸಿದ ವಿಶೇಷ ಸ್ಥಾನಮಾನದ ಶಿಫಾರಸಿನಲ್ಲಿ ಹೈ.ಕ. ಭಾಗದಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಅನುದಾನದಲ್ಲಿ ಪಾಲು ನೀಡಬೇಕೆಂಬ ಶಿಫಾರಸು ಮಾಡಲಾಗಿದೆ. ಆದರೆ ಅದರ ಜಾರಿಗೆ ಸಂಬಂಧಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಹೋರಾಟ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ರೂಪರೇಷೆಗಳನ್ನು ಸಿದ್ಧಪಡಿಸಲು ಜ.19ರಂದು ಬೆಳಗ್ಗೆ 11ಕ್ಕೆ ನಗರದ ಟ್ಯಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ. ಜಿಲ್ಲೆಯ ಎಲ್ಲ ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯವರು ಸಭೆಗೆ ಪ್ರತಿನಿಧಿಗಳನ್ನು ಕಳಿಸಲು ಅವರು ಕೋರಿದ್ದಾರೆ.