ಆರ್‌ಟಿಪಿಎಸ್; ಹಳಿ ತಪ್ಪಿದ ಕಲ್ಲಿದ್ದಲು ವ್ಯಾಗನ್
ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಕಲ್ಲಿದ್ದಲು ಹೊತ್ತು ಸಾಗುತ್ತಿದ್ದ ರೈಲಿನ ಎಂಜಿನ್ ಸೇರಿ ಎರಡು ವ್ಯಾಗನ್‌ಗಳು ಬುಧವಾರ ರಾತ್ರಿ ಹಳಿ ತಪ್ಪಿವೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ವಿದ್ಯುತ್ ಕೇಂದ್ರದೊಳಕ್ಕೆ ತೆರಳಲು ಮುಖ್ಯ ರೇಲ್ವೆ ಮಾರ್ಗದಿಂದ ಸ್ಥಾವರಕ್ಕೆ ತಿರುವು ಪಡೆಯುತ್ತಿದ್ದ ರೇಕ್ ಸಮರ್ಪಕವಾಗಿ ಹಳಿ ಮೇಲೆ ಸಾಗದೇ ಎಂಜಿನ್ ಸಹಿತ ಎರಡು ವ್ಯಾಗನ್ ಹಳಿ ತಪ್ಪಿವೆ. ಇದರಿಂದ ಕಲ್ಲಿದ್ದಲು ಸಾಗಣೆ ಹಾಗೂ ಎತ್ತುವಳಿಗೆ ಅಡಚಣೆಯಾಗಿದೆ. ಆರ್‌ಟಿಪಿಎಸ್ ಲಿಖಿತ ಮನವಿ ಮೇರೆಗೆ ದಕ್ಷಿಣ ಮಧ್ಯ ರೇಲ್ವೆ ಗುಂತಕಲ್ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಿಶೇಷ ಕ್ರೇನ್ ಸಹಾಯದಿಂದ ಹಳಿ ತಪ್ಪಿದ್ದ ಲೋಕೋ ಎಂಜಿನ್ ಮತ್ತು ವ್ಯಾಗನ್ ಪುನಾ ಹಳಿ ಮೇಲೆ ಎತ್ತಿರಿಸಿ ಸಾಗಣೆ ಸುಗಮಗೊಳಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈ ಕುರಿತು ಪ್ರತಿಕ್ರಿಯಿಸಿದ ಆರ್‌ಟಿಪಿಎಸ್ ಇಡಿ ವೇಣುಗೋಪಾಲ್ ಅವರು, ಘಟನೆಯಿಂದ ಹಾನಿಯಾಗಿಲ್ಲ. ವಿದ್ಯುತ್ ಕೇಂದ್ರದ 8 ಘಟಕಗಳು ವಿದ್ಯುತ್ ಉತ್ಪಾದಿಸುತ್ತಿವೆ ಎಂದು ತಿಳಿಸಿದ್ದಾರೆ.