ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಐಟಿಐ ಸೆಮಿಸ್ಟರ್ ಪದ್ಧತಿ ಕೈ ಬಿಡಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

Rashmi Kasaragodu
Updated On : 17 Jan 2014, 12:25 pm

ಕ.ಪ್ರ. ವಾರ್ತೆ    ರಾಯಚೂರು    ಜ.16
ಸರ್ಕಾರ ಐಟಿಐ ನಡೆಸುವ ಕುಶಲಕರ್ಮಿ ತರಬೇತಿಯಲ್ಲಿ ಏಕಾಏಕಿ ಸೆಮಿಸ್ಟರ್ ಪದ್ಧತಿ ಜಾರಿಗೊಳಿಸಿದ್ದು, ಕೂಡಲೇ ಸೆಮಿಸ್ಟರ್ ಪದ್ಧತಿ ಕೈಬಿಟ್ಟು ಯಥಾಸ್ಥಿತಿ ದೀರ್ಘಕಾಲೀನ ಕೋರ್ಸ್ ನಡೆಸಬೇಕೆಂದು ಆಗ್ರಹಿಸಿ ಎಐಡಿವೈಒ, ಎಐಡಿಎಸ್‌ಒ ನೇತೃತ್ವದಲ್ಲಿ ಐಟಿಐ ವಿದ್ಯಾರ್ಥಿಗಳ ಹೋರಾಟ ಸಮಿತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಮಿತಿ ಮುಖಂಡರು, ಕಳೆದ 2013 ಆಗಸ್ಟ್ ತಿಂಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದ ಮೇಲೆ ಐಟಿಐನ ದೀರ್ಘಕಾಲೀನ ಬೋಧನಾ ಪದ್ಧತಿ ಹಾಗೂ ತರಬೇತಿ ಬದಲಾಯಿಸಿ ಸರಿಯಾದ ಸಮಾಲೋಚನೆ ನಡೆಸದೆ ಸೆಮಿಸ್ಟರ್ ಪದ್ಧತಿ ಜಾರಿಗೊಳಿಸಿರುವುದು ಬೇಜವಾಬ್ದಾರಿಯುತ ನಡೆವಳಿಕೆಯಾಗಿದೆ. ಐಟಿಐ ತರಬೇತಿದಾರರಿಗೆ ಆಘಾತವಾಗಿದ್ದು, ಕಾಲೇಜು ಪ್ರಾಚಾರ್ಯರು ಹಾಗೂ ಬೋಧನಾ ಸಿಬ್ಬಂದಿ ಗೊಂದಲದಲ್ಲಿದ್ದಾರೆ. ಸೆಮಿಸ್ಟರ್ ಪದ್ಧತಿ ಜಾರಿಯಿಂದ ತರಬೇತಿಗೆ ಸಮಯಾವಕಾಶ ಕಡಿಮೆಯಾಗಿ ಪರೀಕ್ಷೆ ಮತ್ತು ಅಂಕಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರಕುತ್ತದೆ ಮತ್ತು ಉದ್ಯೋಗಾರ್ಹತೆಗೆ ಧಕ್ಕೆ ಉಂಟಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐಟಿಐ ಸಮಿಸ್ಟರ್ ಪದ್ಧತಿ ಜಾರಿಗೊಳಿಸುವ ಬಗ್ಗೆ ಗೊಂದಲವಿದ್ದು, 2013 ಜೂನ್, ಜುಲೈ ತಿಂಗಳಲ್ಲಿ ಪ್ರವೇಶ ಪ್ರಕ್ರಿಯೆ ನಡೆದರೂ ರಾಜ್ಯ ಡಿಇಟಿಯಿಂದ ಆಗಸ್ಟ್ ಕೊನೆ ಭಾಗದವರೆಗೆ ಎಲ್ಲ ಸಂಸ್ಥೆಗಳಿಗೆ ಸೆಮಿಸ್ಟರ್ ತಲುಪಿಸುವಲ್ಲಿ ವಿಳಂಬ ಮಾಡಿದೆ. ಪ್ರಸಕ್ತ ತರಬೇತಿ ಪಠ್ಯಕ್ರಮ ಹಾಗೂ ಶಿಕ್ಷಕರ ತರಬೇತಿಯ ಬಗ್ಗೆ ಯಾವುದೇ ಪೂರ್ವ ತಯಾರಿ ನಡೆಸದ ಡಿಇಟಿ ಪರೀಕ್ಷೆ ತಯಾರಿಯಲ್ಲಿ ತೊಡಗಿ ಐಟಿಐ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ವಿದ್ಯಾರ್ಥಿಗಳ ಪರವಾದ ನಿರ್ಧಾರ ತಳೆದು ಸೆಮಿಸ್ಟರ್ ಪದ್ಧತಿ ಕೈಬಿಟ್ಟು ಯಥಾಸ್ಥಿತಿಯಂತೆ ದೀರ್ಘಕಾಲೀನ ಕೋರ್ಸ್ ನಡೆಸಬೇಕು ಹಾಗೂ ಪಠ್ಯಕ್ರಮ ಬದಲಾವಣೆಗೆ ಸಾಕಷ್ಟು ಸಮಯಾವಕಾಶ ನೀಡಿ ತಜ್ಞರ ಹಾಗೂ ಎಲ್ಲ ಭಾಗೀದಾರರ ಅಭಿಪ್ರಾಯ ಸಂಗ್ರಹಿಸಿ ಮುಂದುವರಿಯಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಎಐಡಿವೈಒ, ಎಐಡಿಎಸ್‌ಒ ಹಾಗೂ ಐಟಿಐ ವಿದ್ಯಾರ್ಥಿಗಳ ಹೋರಾಟ ಸಮಿತಿ ಮುಖಂಡರಾದ ಸಿ. ಮಹೇಶ, ಚನ್ನಬಸವ ಜಾನೇಕಲ್, ಶರಣಪ್ಪ ಉದ್ಬಾಳ, ಹನುಮಂತ, ಸುರೇಶ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement