ಖಜೂರಿಯಲ್ಲಿ ಕಣ್ಣೀರಧಾರೆ
ಕ.ಪ್ರ. ವಾರ್ತೆ ಖಜೂರಿ(ಆಳಂದ) ಜ.16
ಪಾತಕಿ ಜೊತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಮಲ್ಲಿಕಾರ್ಜುನ ಬಂಡೆ (39) ಅವರ ಅಗಲಿಕೆ ಖಜೂರಿಯಲ್ಲಿ ದುಃಖಸಾಗರವನ್ನೇ ಹುಟ್ಟುಹಾಕಿತ್ತು. ಬಂಡೆ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಜನಜಾತ್ರೆ ಸೇರಿತ್ತಲ್ಲದೆ ಬಂದವೆರಲ್ಲೂರ ಅವರ ಅಗಲುವಿಕೆಗೆ ಶೋಕಿಸಿದರು.
ವೀರಶೈವ ಪರಂಪರೆಯಂತೆ ರುದ್ರಾಕ್ಷಿ, ವಿಭೂತಿ, ಕರಕಿ, ಕುಂಕುಮ ಬಳಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದಕ್ಕೂ ಮುನ್ನ ಪೋಲಿಸರು ಮೂರು ಸುತ್ತು ಕುಶಾಲ ತೋಪು ಹಾರಿಸಿ ಗೌರವ ಸಲ್ಲಿಸಿದರು. ಶಹಾಬಜಾರ್ ಸಲಫಲಮಠದ ಡಾ. ಮಹಾಂತ ಶ್ರೀ ನೇತೃತ್ವದಲ್ಲಿ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಸಮಾಜದ ಬಸವ ಜಯ ಮೃತ್ಯುಂಜಯ್ ಶ್ರೀ, ಆಂದೋಲಾದ ಸಿದ್ದಲಿಂಗಶ್ರೀ, ಚೌದಾಪುರಿ ಹಿರೇಮಠದ ರಾಜಶೇಖರ ದೇವರು ಸೇರಿದಂತೆ ಸುಮಾರು 11ಕ್ಕೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿಗಳು ನಡೆದವು.
ಬಿಜೆಪಿ ಮುಖಂಡರಾದ ಸುಭಾಷ್ ಬಿರಾದಾರ್ ಕಮಲಪುರ್, ಬಸವರಾಜ್ ಇಂಗಿನ್, ಜಿಪಂ ಸದಸ್ಯರಾದ ಮಂಗಲಾ ನರೋಣಿ, ಪೂಜಾ ರಮೇಶ್ ಲೋಹಾರ್, ಜಯಶ್ರೀ ಸಾವಳೇಶ್ವರ, ತಾಪಂ ಅಧ್ಯಕ್ಷೆ ಪ್ರಭಾವತಿ ಢಗೆ ಸೇರಿದಂತೆ ಹಲವಾರು ರಾಜಕೀಯ ನಾಯಕರು, ಸಾವಿರಾರು ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಎಲ್ಲೆಲ್ಲೂ ಜನದಟ್ಟಣೆ: ಗ್ರಾಮದಲ್ಲಿ ಮಹಿಳೆಯರು, ಯುವಕರು, ಮಕ್ಕಳೂ ಸೇರಿದಂತೆ ಸಾವಿರಾರು ಜನರು ಅಂತ್ಯ ಸಂಸ್ಕಾರದಲ್ಲಿ ಅತ್ಯಂತ ದುಃಖಿತರಾಗಿ ಪಾಲ್ಗೊಂಡಿದ್ದರು. ಮಹಿಳೆಯರಂತೂ ಬಿಕ್ಕಿ, ಬಿಕ್ಕಿ ಅತ್ತರು. ಸಾರ್ವಜನಿಕರಿಂದ ಬಂಡೆ ಅಮರ್ ರಹೇ, ಬಂಡೆಯವರಿಗೆ ಜಯವಾಗಲಿ ಎಂಬ ಘೋಷಣೆಗಳೂ ಮೊಳಗಿದವು. ವಂದೇ ಮಾತರಂ ಎನ್ನುವ ಮೂಲಕ ಅಗಲಿದ ಅಧಿಕಾರಿಗೆ ತಮ್ಮ ಅಂತಿನ ನಮನ ಸಲ್ಲಿಸಿದರು. ಗ್ರಾಮದಲ್ಲಿ ತಮ್ಮ ಮಗನನ್ನು ಕಳೆದುಕೊಂಡ ಆಕ್ರಂದನ ಮುಗಿಲು ಮುಟ್ಟಿತು.
ಅಲಂಕೃತ ಲಾರಿಯಲ್ಲಿ: ಗ್ರಾಮದಿಂದ ಸುಮಾರು 3ಕಿ.ಮೀ. ದೂರದ ಬಂಡೆಯವರ ಸ್ವಂತ ತೋಟಕ್ಕೆ ಪಾರ್ಥೀವ ಶರೀರವನ್ನು ಹೂಗಳಿಂದ ಅಲಂಕೃತ ಲಾರಿಯಲ್ಲಿ ತೆಗೆದುಕೊಂಡು ಹೋಗಲಾಯಿತು. ಸುದೀರ್ಘ ಹಾದಿಯಲ್ಲಿ 20 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಬಂಡೆ ಪಾರ್ಥೀವ ಶರೀರದ ಜೊತೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಭಜನಾ ಮೇಳಗಳು ಸಹ ಸೇರಿದ್ದವು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರು ರಾಜ್ಯ ಸರ್ಕಾರದ ನಿರ್ಲಕ್ಷ್ಯ, ಭ್ರಷ್ಟ ಅಧಿಕಾರಿಗಳ ವಿರುದ್ಧ ಹಾಗೂ ಗ್ರಾಮಕ್ಕೆ ಬಾರದ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು. ಉದ್ರಿಕ್ತರನ್ನು ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟರು. ಕೊನೆಗೂ ಬಂಡೆಯವರ ಅಭಿಮಾನಿಗಳು ಹಾಗೂ ಕಾರ್ಯಕತರು ತಾವೇ ಸ್ವತಃ ನಿಯಂತ್ರಿಸಿಕೊಂಡಿದ್ದರಿಂದ ಅಂತ್ಯಕ್ರಿಯೆ ನೆರವೇರಿತು.