ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ. ವಾರ್ತೆ ಲಿಂಗಸ್ಗೂರು ಜ.16
ತಾಲೂಕಿನ ಗೌಡೂರು ಗ್ರಾಮದಲ್ಲಿ ಮಹಿಳಾ ಶೌಚಾಲಯಕ್ಕೆ ತಡೆಗೋಡೆ ನಿರ್ಮಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕನ್ನಡ ಸೇನೆ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪರಿಗೆ ಗುರುವಾರ ಮನವಿ ಸಲ್ಲಿಸಿದರು.
ಗೌಡೂರು ಗ್ರಾಮದಲ್ಲಿ ಮಹಿಳಾ ಶೌಚಾಯಲಯದ ಎರಡೂ ಬದಿಯಲ್ಲಿ ತಡೆಗೋಡೆ ಇಲ್ಲದ ಕಾರಣ ಮಹಿಳೆಯರು ಶೌಚಕ್ಕೆ ತೆರಳಲು ಮುಜುಗರ ಉಂಟು ಮಾಡಿದೆ. ತಡೆಗೋಡೆ ನಿರ್ಮಿಸಲು ಅನುದಾನ ಬಿಡುಗಡೆಯಾಗಿದ್ದರೂ ಇದುವರೆಗೆ ಕಾಮಗಾರಿ ನಡೆಸುವಲ್ಲಿ ಗ್ರಾಪಂ ಹಿಂದೇಟು ಹಾಕುತ್ತಿದೆ. ಗ್ರಾಪಂ ವ್ಯಾಪ್ತಿಯ ಇಂದಿರಾ ಆವಾಸ್, ಬಸವ, ಆಶ್ರಯ ಸೇರಿದಂತೆ ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದ ಕೆಲ ಫಲಾನುಭವಿಗಳಿಗೆ ಚೆಕ್ ನೀಡಲಾಗಿದ್ದು, ಉಳಿದ ಫಲಾನುಭವಿಗಳಿಗೆ ಚೆಕ್ ನೀಡುವಲ್ಲಿ ಪಿಡಿಒ ನಿರ್ಲಭ್ಯ ತೋರುತ್ತಿದ್ದಾರೆ.
ಗ್ರಾಮದ ಯಮನಮ್ಮ ಗುಂಡಪ್ಪ ಬಂಡೇಬಾವಿ ಎಂಬುವರ ಹೆಸರಿನ ಚೆಕ್ಕನ್ನು ಖೊಟ್ಟಿ ಸಹಿ ಮಾಡಿ ಹಣ ಪಡೆಯಲಾಗಿದೆ ಎಂದು ಗ್ರಾಪಂ ಪಿಡಿಒ ಹೇಳುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಗೌರವಾಧ್ಯಕ್ಷ ಪ್ರತಾಪಸಿಂಗ್, ತಾಲೂಕು ಕಾರ್ಯದರ್ಶಿ ಬಿ.ಎಸ್.ನಾಯಕ, ಗ್ರಾಮದ ಮಹಿಳೆಯರಾದ ಈರಮ್ಮ ಕಡ್ಡೋಣಿ, ಸುಕ್ಕಮ್ಮ ಹಡಪದ, ರುದ್ರಮ್ಮ, ಮಹಾದೇವಮ್ಮ ಕಡ್ಡೋಣಿ, ಅನ್ನಪೂರ್ಣ ಕೋಳೂರು, ಹನುಮಮ್ಮ, ಗೌರಮ್ಮ ಇದ್ದರು.