ಮಾತೃಭಾಷೆ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚನೆ
ಕ.ಪ್ರ. ವಾರ್ತೆ ರಾಯಚೂರು ಜ.16
ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದು, ಕನ್ನಡ ಅನುಷ್ಠಾನ ಕುರಿತು ಎಲ್ಲ ಇಲಾಖೆಯವರು ತಪ್ಪದೇ ತಮ್ಮ ಅನುಪಾಲನಾ ವರದಿಗಳನ್ನು ಪ್ರತಿ ತಿಂಗಳು ಐದರೊಳಗೆ ಸಲ್ಲಿಸುವುದು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕ್ರೂಢೀಕೃತ ವರದಿಯನ್ನು ಜಿಪಂಗೆ ಸಲ್ಲಿಸುವಂತೆ ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಮಾಸಿಕ ಕೆಡಿಪಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕನ್ನಡ ಭಾಷೆಯ ಬಳಕೆಯ ಕುರಿತು ಅಧಿಕಾರಿಗಳು ಯಾವುದೇ ಕಾರಣಕ್ಕೆ ನಿರ್ಲಕ್ಷ್ಯ ತೋರುವಂತಿಲ್ಲ. ಆಡಳಿತದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ನೀಡುವತ್ತ ಹೆಚ್ಚಿನ ಗಮನಹರಿಸುವಂತೆ ಆದೇಶಿಸಿದರು.
ಜಿಪಂ ಸಿಇಒ ವಿಜಯ ಜ್ಯೋತ್ಸ್ನಾ ಮಾತನಾಡಿ, ಎಲ್ಲ ಇಲಾಖೆಯವರು ಇಲಾಖೆಗಳಿಗೆ ನೀಡಿರುವ ಕ್ರಿಯಾ ಯೋಜನೆಗಳನ್ನು ತಪ್ಪದೇ ಜಿಪಂಗೆ ಸಲ್ಲಿಸಿದಲ್ಲಿ ಸದಸ್ಯರಿಗೆ ಮಾಹಿತಿ ಒದಗಿಸಲು ಸಾಧ್ಯವಾಗುತ್ತದೆ. ಕಾಮಗಾರಿಯ ಪ್ರಗತಿ, ಕ್ರಿಯಾ ಯೋಜನೆಗಳೆಂದು ಪ್ರತಿ ಸದಸ್ಯರಿಗೂ ತಿಳಿದುಕೊಳ್ಳಲು ಅನುಕೂಲವಾಗುವುದಲ್ಲದೆ ಸಭೆಗಳಲ್ಲಿ ಪ್ರಗತಿ ಪರಿಶೀಲನೆ ವೇಳೆಯಲ್ಲಿ ಸಹಾಯವಾಗಲಿದೆ ಎಂದರು.
ಈಗಾಗಲೇ ಎಲ್ಲ ಇಲಾಖೆಗಳಿಗೆ ನೀಡಿರುವ ಅನುದಾನ, ಭೌತಿಕ ಹಾಗೂ ಆರ್ಥಿಕ ಗುರಿಯನ್ನು ಸಾಧಿಸಲು ಪ್ರತಿಯೊಂದು ಇಲಾಖೆಯ ಅಧಿಕಾರಿ ಶ್ರಮಿಸಬೇಕು. ಭೌತಿಕ ಹಾಗೂ ಆರ್ಥಿಕ ಗುರಿಯನ್ನು ಮುಟ್ಟಲು, ನೀಡಿರುವ ಅನುದಾನವನ್ನು ಬಳಕೆ ಮಾಡಿ ಕಾಮಗಾರಿ ಪೂರ್ಣಗೊಳಿಸಲು ಆದೇಶಿಸಿದರು.
ಶಿಕ್ಷಣ ಇಲಾಖೆ: ಇಲಾಖೆಯಲ್ಲಿ ಶಿಕ್ಷಕರ ಕೊರತೆಯಿದೆ. ಪ್ರೌಢ ಶಾಲೆಗಳಿಗೆ ಹೊರ ಗುತ್ತಿಗೆ ಆಧಾರದಲ್ಲಿ 55 ಶಿಕ್ಷಕರನ್ನು ನೇಮಿಸಿಕೊಳ್ಳಲು ಬಿಆರ್ಜಿಎಫ್ ಅನುದಾನದಲ್ಲಿ 10 ಲಕ್ಷ ಬಿಡುಗಡೆಯಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲು ಜಿಪಂ ವತಿಯಿಂದ 5 ಲಕ್ಷ ಬಿಡುಗಡೆಗೊಳಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ಲೋಕೋಪಯೋಗಿ ಇಲಾಖೆಯ ಮೇಲಿನ ಚರ್ಚೆಯಲ್ಲಿ ಹೊಸ ಮರಳು ನೀತಿಯಿಂದಾಗಿ ಮರಳು ಸಾಗಾಣಿಕೆಗೆ ತಾಲೂಕು ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾವಲು ಸಮಿತಿ ರಚಿಸಲಾಗಿದೆ. ತಪಾಸಣೆಗಾಗಿ ಈ ಹಿಂದೆ ಪೊಲೀಸ್ ಅಧಿಕಾರಿಗಳು, ತಹಸೀಲ್ದಾರ್, ಪಿಡಿಒಗಳಿಗೂ ಅಕ್ರಮ ಮರಳು ಸಾಕಾಣಿಕೆಗೆ ಕೇಸ್ ದಾಖಲಿಸುವಂತೆ ತಂಡ ರಚಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ಸಭೆಯಲ್ಲಿ ಹಗಲು- ರಾತ್ರಿ ಪರವಾನಗಿ ರಹಿತ ಮರಳು ಸಾಕಾಣಿಕೆ ಅಕ್ರಮವಾಗಿ ಸಾಗಿರುವ ಬಗ್ಗೆ ಇಲಾಖೆಯ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿರುವುದಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಶ ಮುದ್ಲಾಪುರ ಆಕ್ಷೇಪಿಸಿ ಇಲಾಖೆಯ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ದೂರಿದರು.
ಕೃಷಿ: 2013-14ನೇ ಸಾಲಿನಲ್ಲಿ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯ ಬೀಜ ಉತ್ಪಾದಕರ ಮಹಾಮಂಡಳಿಯಿಂದ ಒಟ್ಟು 13991 ಕ್ವಿಂಟಲ್ ಬೀಜ ವಿತರಿಸಲಾಗಿದೆ. ರಾಸಾಯನಿಕ ಗೊಬ್ಬರ ಸಂಗ್ರಹವಿದ್ದು, ಸಮಸ್ಯೆಯಿಲ್ಲ. 1 ಲಕ್ಷಕ್ಕೂ ಮೇಲ್ಪಟ್ಟು ರೈತರಿಗೆ ಈಗಾಗಲೇ ರಸಗೊಬ್ಬರ ಹಂಚಿಕೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ಆರೋಗ್ಯ: ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ನಾರಾಯಣಪ್ಪ ಮಾತನಾಡಿ, ಎಲ್ಲ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಡೆಂಘೀ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಸಿಂಧನೂರು ತಾಲೂಕಿನ ಕೂಳ್ಳೂರು ಗ್ರಾಮದಲ್ಲಿ ಡೆಂಘೀ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಫಾಗಿಂಗ್ ಮಾಡಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ನಂತರ ವಿವಿಧ ಇಲಾಖೆಗಳ ಪ್ರಗತಿಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಕೆ. ಶರಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಇದ್ದರು. ಯೋಜನಾಧಿಕಾರಿ ಡಾ. ರೋಣಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.