ಕೃಷಿ ವಿವಿಯಲ್ಲಿ ನಾಳೆ ಶ್ವಾನ ಪ್ರದರ್ಶನ
ರಾಯಚೂರು: ಪಶು ವೈದ್ಯಕೀಯ ಸಂಘ ಹಾಗೂ ಪಶುಸಂಗೋಪನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಸಹಯೋಗದಲ್ಲಿ ನಗರದ ಕೃಷಿ ವಿವಿ ಆವರಣದಲ್ಲಿ ಜ.19ರಂದು ಶ್ವಾನಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಪಶುವೈದ್ಯರ ಸಂಘದ ಅಧ್ಯಕ್ಷ ಡಾ. ರಶೀದ್ ಇಕ್ಬಾಲ್ ಹೇಳಿದರು. ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ವಾನ ಪ್ರದರ್ಶನದಲ್ಲಿ 150ರಿಂದ 200 ವಿವಿಧ ತಳಿಗಳ ಶ್ವಾನಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರದರ್ಶನದಲ್ಲಿ ಪಾಲ್ಗೊಳ್ಳುವ ನಾಯಿಗಳಿಗೆ ಹುಚ್ಚುನಾಯಿ ರೋಗದ ತಡೆಗೆ ಲಸಿಕೆ ಉಚಿತವಾಗಿ ಇಲಾಖೆಯಿಂದ ನೀಡಲಾಗುತ್ತದೆ ಎಂದು ತಿಳಿಸಿದರು. ನಾಯಿಗಳ ಮಾಲೀಕರಿಗೆ ಪ್ರಮಾಣ ಪತ್ರ, ಬಹುಮಾನ ನೀಡಲಾಗುತ್ತದೆ. ಬರ್ನಾಡ್ ತಳಿ ಹೊರತುಪಡಿಸಿ ಉಳಿದೆಲ್ಲ ತಳಿಗಳ ಶ್ವಾನಗಳು ನಗರದ ಹವಾಗುಣಕ್ಕೆ ಹೊಂದಿಕೊಂಡು ಬದುಕುತ್ತವೆ ಎಂದ ಅವರು, ಉತ್ತಮ ತಳಿಯ ಶ್ವಾನಗಳು 25 ಸಾವಿರ ವರೆಗೆ ಮಾರಾಟವಾಗಿದ್ದು ದಾಖಲೆಯಿದೆ ಎಂದು ಹೇಳಿದರು. ಶ್ರೀನಿವಾಸ್, ಷಣ್ಮುಖ ಇದ್ದರು.