ರೈತರು ಕಂಗಾಲು
ಕ.ಪ್ರ. ವಾರ್ತೆ ರಾಯಚೂರು ಜ.17
ಸಮೃದ್ಧಿಯೂ ಒಂದೊಮ್ಮೆ ಸಮಸ್ಯೆ ತಂದೊಡ್ಡುತ್ತದೆ ಎಂಬುದಕ್ಕೆ ತಾಲೂಕಿನ ರೈತರೇ ಸಾಕ್ಷಿಯಾಗಿದ್ದಾರೆ. ಸಮರ್ಪಕ ಮಳೆ, ಉತ್ತಮ ಹವಾಗುಣದಿಂದಾಗಿ ರೈತರು ಉತ್ತಮ ತರಕಾರಿ ಫಸಲು ಕಂಡಿದ್ದೇ ಈಗ ಅವರಿಗೆ ಮುಳುವಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ತರಕಾರಿ ದರ ಕುಸಿತ ಕಂಡಿದ್ದರಿಂದ ಶುಕ್ರವಾರ ತರಕಾರಿ ಖರೀದಿಯಾಗದೇ ರೈತರು ಕಂಗೆಟ್ಟ ಘಟನೆ ನಡೆದಿದೆ.
ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಮೂಟೆಗಳಲ್ಲಿ ರೈತರು ಹೊತ್ತು ತಂದಿದ್ದ ವಿವಿಧ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟವಾಗದೇ ರೈತರು ಅತಂತ್ರ ಸ್ಥಿತಿಗೆ ಸಿಲುಕಿದರು. ನಗರದ ಹತ್ತಿ ಮಾರುಕಟ್ಟೆಯಲ್ಲಿ ನಡೆಯುವ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಬೆಳ್ಳಂಬೆಳಗ್ಗೆ ರೈತರು ತಮ್ಮ ಉತ್ಪನ್ನ ಹೊತ್ತು ಆಗಮಿಸಿ ಖರೀದಿದಾರರಿಗೆ ಕಾದು ಕುಳಿತರೂ ಒಬ್ಬರೂ ಮಾರುಕಟ್ಟೆಯತ್ತ ಸುಳಿಯಲಿಲ್ಲ.
ನಷ್ಟದ ಭೀತಿ: ಕೊನೆಗೆ ಆತಂಕಗೊಂಡ ರೈತರು ಖರೀದಿದಾರರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಕೆಲವೇ ಕಲ ವರ್ತಕರು ಸ್ಥಳಕ್ಕೆ ಆಗಮಿಸಿ ಮಾರುಕಟ್ಟೆಯಲ್ಲಿ ತರಕಾರಿ ದರ ಕುಸಿತ ಕಂಡಿದೆ. ಈಗಾಗಲೇ ಖರೀದಿಸಿ ಮಾರಾಟ ಮಾಡಿದ ತರಕಾರಿಯ ಹಣವೇ ಮರಳಿಲ್ಲ. ಇನ್ನು ಹೊಸದಾಗಿ ಮತ್ತೆ ತರಕಾರಿ ಖರೀದಿಸಿದರೆ ನಷ್ಟ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ತರಕಾರಿ ಖರೀದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದರ ಕುಸಿತ: ಸದ್ಯ ಮಾರುಕಟ್ಟೆಯಲ್ಲಿ ಎಲ್ಲ ತರಕಾರಿ ದರವು ರು. 10ರಿಂದ ರು. 30 ಆಸುಪಾಸಿನಲ್ಲಿದೆ. ಕಳೆದ ಕೆಲ ದಿನಗಳಿಂದ ಇಂಥದ್ದೇ ಪರಿಸ್ಥಿತಿಯಿದ್ದು, ರೈತರು ಬೆಳೆದ ಬೆಳೆಯೂ ಈ ವೇಳೆಯೇ ಮಾರುಕಟ್ಟೆಗೆ ಮತ್ತಷ್ಟು ಪೂರೈಕೆಯಾಗಿರುವುದು ಸಮಸ್ಯೆ ತೀವ್ರತೆ ಹೆಚ್ಚಿಸಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಹೂಕೂಸು, ಟೋಮೆಟೋ ಮತ್ತಿತರ ತರಕಾರಿಗೆ ಭಾರೀ ಬೆಲೆ ಬಂದಿದ್ದರಿಂದ ಬಹಳಷ್ಟು ರೈತರು ಆ ಬೆಳೆಗಳನ್ನೇ ಬೆಳೆದಿರುವುದು ಸಂಕಷ್ಟ ಇಮ್ಮಡಿಗೊಳಿಸಿದೆ. ದಿಢೀರ್ ಭಾರೀ ಪ್ರಮಾಣದಲ್ಲಿ ಹೂಕೋಸು, ಟೋಮೆಟೋ ಮಾರುಕಟ್ಟೆಗೆ ಸದ್ಯ ಬಂದಿದೆ. ಅದರಿಂದಾಗಿ ದರ ಕುಸಿತವಾಗಿದೆ ಎಂಬುದು ಖರೀದಿದಾರರ ಅಭಿಪ್ರಾಯ.
ಸಾಗಣೆ ಹೊರೆ: ನಗರದ ಮಾರುಕಟ್ಟೆಗೆ ತರಕಾರಿಯನ್ನು ಸಾಗಿಸಲು ಟೊಮೆಟೋ ಗೆ ಪ್ರತಿ ಕ್ಯಾನ್ಗೆ ರು. 10 ಹಾಗೂ ಹೂಕೋಸು ಪ್ರತಿ ಚೀಲಕ್ಕೆ ರು. 20ರಿಂದ 30 ರೈತರು ಈಗಾಗಲೇ ನೀಡಿದ್ದಾರೆ. ಮರಳಿ ಕೊಂಡೊಯ್ದರೆ ತರಕಾರಿ ಕೆಡುತ್ತದೆ. ಬೇರೆ ಮಾರುಕಟ್ಟೆಗೆ ಸಾಗಿಸಲೂ ಮತ್ತಷ್ಟು ವೆಚ್ಚದ ಹೊರೆ ರೈತರು ಹೊರಬೇಕಾದ ಸ್ಥಿತಿಯಿದೆ. ಹೀಗಾಗಿ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಸಾಗಣೆ ವೆಚ್ಚ: ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ರೈತರು ಉತ್ತಮ ಫಸಲು ಕಂಡಿದ್ದರೂ ನಷ್ಟವೇ ಗತಿ ಎಂಬಂತಾಗಿದೆ. ಮಾರುಕಟ್ಟೆಯಲ್ಲಿನ ದರ ಕುಸಿತದಿಂದ ಈ ಪರಿಸ್ಥಿತಿ ಒದಗಿದೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸಿ, ತರಕಾರಿ ಉತ್ಪನ್ನವನ್ನು ಬೇರೆ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡಲು ರೈತರಿಗೆ ಸಾಗಣೆ ವೆಚ್ಚ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಒಟ್ಟಾರೆಯಾಗಿ ನಗರದ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೋ, ಹೂಕೋಸು ಮತ್ತಿತರೆ ಬೆಳೆಗಳ ಖರೀದಿ ಸ್ಥಗಿತಗೊಂಡಿದ್ದು, ರೈತರು ಮಾರುಕಟ್ಟೆಯಲ್ಲಿಯೇ ಖರೀದಿದಾರರಿಗೆ ಕಾಯುವಂತಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.