21ರಂದು ಅಂಬಿಗರ ಚೌಡಯ್ಯ ಜಯಂತಿ ಆಚರಣೆ
ಕ.ಪ್ರ. ವಾರ್ತೆ ರಾಯಚೂರು ಜ.18
ನಗರದಲ್ಲಿ ಜಿಲ್ಲಾಡಳಿತ ಮತ್ತು ಗಂಗಾಮತಸ್ಥ ಸಮಾಜದ ಆಶ್ರಯದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತಿ ಕಾರ್ಯಕ್ರಮ ಜ.21ರಂದು ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಕೆ. ಶಾಂತಪ್ಪ ಹೇಳಿದರು.
ಅವರು ನಗರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.21ರಂದು ಬೆಳಗ್ಗೆ 8.30ಕ್ಕೆ ನಗರದ ಬಿಆರ್ಬಿ ಕಾಲೇಜು ಬಳಿಯಿರುವ ಅಂಬಿಗರ ಚೌಡಯ್ಯ ಪುತ್ಥಳಿಗೆ ವಿಶೇಷ ಪೂಜೆ ಗೌರವ ಸಲ್ಲಿಕೆಯ ನಂತರ ಶರಣರ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ರಂಗಮಂದಿರ ತಲುಪಲಿದೆ ಎಂದು ತಿಳಿಸಿದರು.
ಸನ್ಮಾನ: ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಜಯಂತಿ ಕಾರ್ಯಕ್ರಮ ಆಯೋಜಿಸಿದ್ದು, ಸಮಾರಂಭದಲ್ಲಿ ಗಂಗಾಮತಸ್ಥ ಸಮಾಜಕ್ಕೆ ಸೇರಿದ ಪ್ರತಿಭೆಗಳನ್ನು ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದವರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ. ಮುದುರಂಗಪ್ಪ ವಕೀಲರು, ಸಾಹಿತಿ ಚಿದಾನಂದ ಸಾಲಿ, ಕ್ರೀಡಾ ಕ್ಷೇತ್ರದಲ್ಲಿ ಅಮರೇಶ್, ಹುಸೇನಪ್ಪ ಹಾಗೂ ರತ್ನಾ ರಾಯಚೂರು ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ ಎಂದು ಹೇಳಿದರು.
ಜಯಂತಿ ಅಂಗವಾಗಿ ಜ. 20ರಂದು ಜಿಲ್ಲಾ ಗಂಗಾಮತಸ್ಥ ಸಮಾಜದ ಯುವ ಘಟಕದಿಂದ ಅಂಬಿಗರ ಚೌಡಯ್ಯ ಅವರ ಪುತ್ಥಳಿಗೆ ಕ್ಷೀರಾಭಿಷೇಕ ಸಲ್ಲಿಸಲಾಗುತ್ತದೆ. ಅದೇ ರೀತಿ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ. 39 ಒಳಪಂಗಡಗಳನ್ನು ಒಳಗೊಂಡಿರುವ ಗಂಗಾಮತಸ್ಥ ಸಮಾಜವನ್ನು ಎಸ್ಟಿಗೆ ಸೇರಿಸಿ, ಮೀಸಲಾತಿ ಕಲ್ಪಿಸಲು ಒತ್ತಾಯಿಸಲಾಗಿತ್ತು. ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಈ ಬಗ್ಗೆ ಶಿಫಾರಸು ಕಳಿಸಲಾಗಿತ್ತು. ಆದರೆ ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಕೇಂದ್ರ ಸೂಚಿಸಿದೆ ಎಂದು ತಿಳಿಸಿದರು.
ವರದಿ: ಹಂಪಿ ವಿವಿಯಿಂದ ಗಂಗಾಮತಸ್ಥರ ಜೀವನ, ನಡೆ ನುಡಿ ಮತ್ತಿತರೆ ವಿಚಾರಗಳ ಕುರಿತು ಕುಲಶಾಸ್ತ್ರ ಅಧ್ಯಯನ ವಿಭಾಗದಿಂದ ಸಮೀಕ್ಷೆ ನಡೆಸಿದ್ದು, ವರದಿ ಸಿದ್ಧವಾಗಿದೆ. ಫೆ.9ರಂದು ಯಾನಾಗುಂದಿಯಲ್ಲಿ ಆಯೋಜಿಸಲಾಗುವ ಗಂಗಾಮತಸ್ಥ ಸಮಾಜದ ಬೃಹತ್ ಸಮಾವೇಶದಲ್ಲಿ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸುವ ಮೂಲಕ ಎಸ್ಟಿ ಮೀಸಲಾತಿ ಕಲ್ಪಿಸಲು ಒತ್ತಾಯಿಸಲಾಗುತ್ತದೆ ಎಂದರು.
ಕೇಂದ್ರ ಸಚಿವರು: ಯಾನಾಗುಂದಿಯಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡೀಸ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. 7ರಿಂದ 8 ಲಕ್ಷ ಗಂಗಾಮತಸ್ಥರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು. ಮೀನುಗಾರಿಕೆ ಇಲಾಖೆಯಿಂದ ಗಂಗಾಮತಸ್ಥರಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಮೀನುಗಾರಿಕೆ ಸಹಕಾರ ಸಂಘಗಳಿಗೆ ಸರಿಯಾದ ರೀತಿಯಲ್ಲಿ ಸರ್ಕಾರದ ನೆರವು ದೊರೆಯದೇ ಸಂಕಷ್ಟದಲ್ಲಿವೆ. ಎಲ್ಲ ಜಾತಿ ಜನಾಂಗದವರು ಮೀನುಗಾರಿಕೆಯ ವೃತ್ತಿಗೆ ತೊಡಗಿದ್ದರಿಂದ ಮೂಲ ಕಸುಬಿಗೆ ಪೆಟ್ಟು ಬಿದ್ದಿದೆ ಎಂದು ಹೇಳಿದರು. ಸಮಾಜದ ಪ್ರಮುಖರಾದ ಕಡಗೋಳ ಆಂಜನೇಯ, ಕಡಗೋಳ ಶರಣಪ್ಪ, ಬಾಬುರಾವ್ ಸೇರಿದಂತೆ ಅನೇಕರಿದ್ದರು.