ಪಾದಯಾತ್ರೆಗೆ ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು
ಕ.ಪ್ರ. ವಾರ್ತೆ ಲಿಂಗಸ್ಗೂರು ಜ.18
ತಾಲೂಕಿನ ರೋಡಲಬಂಡಾ ಜಾವೂರ್ ಕ್ರಾಸ್ ಬಳಿಯ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಕಾಲು ಜಾರಿ ನೀರು ಪಾಲಾದ ಘಟನೆ ಶನಿವಾರ ಜರುಗಿದ್ದು, ವಿದ್ಯಾರ್ಥಿಗಳ ಹುಡುಕಾಟ ನಡೆಸಲಾಗುತ್ತಿದೆ.
ಬಾಗಲಕೋಟೆಯ ಪಿಯುಸಿ ದ್ವಿತೀಯ ವರ್ಷ ಪಾಸಾಗಿದ್ದ ಅಕ್ಷಯ ತಂದೆ ರಾಮಚಂದ್ರಪ್ಪ ವೆಂಕಟಪೇಟೆ(20) ಹಾಗೂ ಸಂತೋಷ ತಂದೆ ಈಶ್ವರಪ್ಪ ವೀರಾಪುರ (20) ಎಂಬ ಇಬ್ಬರು ವಿದ್ಯಾರ್ಥಿಗಳು ಪ್ರತಿವರ್ಷದಂತೆ ಈ ವರ್ಷವೂ ಬಾಗಲಕೋಟೆಯಿಂದ ಮಂತ್ರಾಯಲಕ್ಕೆ ಪಾದಯಾತ್ರೆ ಹೊರಟಿದ್ದರು. ನಾರಾಯಣಪುರ ಬಲದಂಡೆ ಮುಖ್ಯ ನಾಲೆ 0.00 ಕಿಮೀ ಬಳಿ ಸ್ನಾನ ಮಾಡಲು ಹೋದಾಗ ಕಾಲು ಜಾರಿ ವಿದ್ಯಾರ್ಥಿಗಳು ನೀರಲ್ಲಿ ಬಿದ್ದಿದ್ದಾರೆ. ಕಾಲುವೆ ದಡ ಸೇರಲು ಪ್ರಯತ್ನಪಟ್ಟರೂ ಸಾಧ್ಯವಾಗದೆ ನೀರು ಪಾಲಾಗಿದ್ದಾರೆಂದು ತಿಳಿದುಬಂದಿದೆ.
ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಠಾಣಾಧಿಕಾರಿ ರವೀಂದ್ರ ನೇತೃತ್ವದ ತಂಡ ತೀವ್ರ ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯಾರ್ಥಿಗಳ ಹುಡುಕಾಟ ನಡೆಸಿದರಾದರೂ ವಿದ್ಯಾರ್ಥಿಗಳು ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಅನಿತಾ ಹದ್ದಣ್ಣವರ್, ಅಪರಾಧ ವಿಭಾಗದ ಪಿಎಸ್ಐ ಬಿ.ಎಸ್. ಹೊಸಹಳ್ಳಿ ಹಾಗೂ ಪೊಲೀಸರ ತಂಡ ಸ್ಥಳದಲ್ಲೇ ಬೀಡು ಬಿಟ್ಟಿದ್ದು, ವಿದ್ಯಾರ್ಥಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಬಲದಂಡೆ ನಾಲೆಗೆ ನೀರು ಹರಿಯುವಿಕೆ ಸ್ಥಗಿತಗೊಳಿಸಲಾಗಿದೆ.