ಪ್ರತಿಭಾನ್ವಿತರಿಗೆ ಶಾಸಕ ನಾಯಕ ಚೆಕ್ ವಿತರಣೆ
ರಾಯಚೂರು: ಮಾನವಿ ತಾಲೂಕಿನ ನೀರಮಾನ್ವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮಾನವಿಯಲ್ಲಿ ಶಾಸಕ ಹಂಪಯ್ಯ ನಾಯಕ ಶನಿವಾರ ಚೆಕ್ ವಿತರಿಸಿದರು. 2012-13ನೇ ಸಾಲಿನಲ್ಲಿ ವಿವಿಧ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ್ದ ವಿದ್ಯಾರ್ಥಿನಿ ಜೆ. ಅರ್ಪಿತಾಗೆ 15 ಸಾವಿರ, ಅನಿಲ್‌ಕುಮಾರ, ದೇವರಾಜ, ಜಿ. ಮಂಜುನಾಥ, ನಿರಂಜನ, ಯಂಕಪ್ಪ ಎಂಬುವವರಿಗೆ ತಲಾ 5 ಸಾವಿರ ಮೌಲ್ಯದ ಚೆಕ್ ಶಾಸಕರು ವಿತರಿಸಿದರು. ಚೆಕ್ ವಿತರಿಸಿ ಮಾತನಾಡಿದ ಅವರು, ಸರ್ಕಾರ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರೋತ್ಸಾಹ ಧನ ನೀಡುತ್ತಿದೆ ಎಂದು ಹೇಳಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ಜೆ. ನಾಗರಾಜ ನಾಯಕ, ಸದಸ್ಯರಾದ ಶಾರದಮ್ಮ ಶ್ರೀರಾಮುಲು, ಧರ್ಮಣ್ಣ, ರಜಾಕ್, ಮುಖಂಡ ರಾದ ಬುಡ್ಡುಸಾಬ್, ರಾಮಣ್ಣ ಅರಕೇರಿ, ಶ್ರೀರಾಮುಲು, ಗ್ರಾಪಂ ಸದಸ್ಯ ಅಹ್ಮದ್ ಸಾಬ್, ಜೆ. ಗೋಪಾಲನಾಯಕ, ಆಲಂಸಾಬ್, ಮಾರೆಪ್ಪ ಇದ್ದರು.
ವಿವೇಕಾನಂದರ ತತ್ವಾದರ್ಶ ಅಳವಡಿಕೆಗೆ ಸಲಹೆ
ಸಿಂಧನೂರು: ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗುವಂತೆ ಸರ್ಕಾರಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಹ್ಲಾದ ರೆಡ್ಡಿ ಕರೆ ನೀಡಿದರು. ಅವರು ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ 151ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಶ್ರಮದಾನ ಮತ್ತು ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎನ್ನೆಸ್ಸೆಸ್ ಅಧಿಕಾರಿ ವೆಂಕಟನಾರಾಯಣ ಮಾತನಾಡಿ, ವಿವೇಕಾನಂದರು ರಾಷ್ಟ್ರ ಕಂಡ ಮಹಾನ ದಾರ್ಶನಿಕರು, ತತ್ವಶಾಸ್ತ್ರಜ್ಞರು, ಚಿಂತಕರು, ಶಿಕ್ಷಣ ತಜ್ಞರು ಹಾಗೂ ಯುವಶಕ್ತಿಯ ಪ್ರತಿಬಿಂಬವಾಗಿದ್ದರು. ಅವರ ಜಯಂತಿ ಅಂಗವಾಗಿ ಜ.22ರವರೆಗೆ ಯುವಕರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಹನುಮಂತಪ್ಪ ಎಸ್, ಸಹಾಯಕ ಪ್ರಾಧ್ಯಾಪಕ ಶಿವಯ್ಯ ಎಂ. ಸೈಯ್ಯದ್ ಆರೀಫ್ ಉಲ್ಲಾ, ಅರ್ಷಿ ಜಮಾಲ್, ಲಕ್ಷ್ಮಿದೇವಿ, ಶಿವುಕುಮಾರ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿಯಿದ್ದರು.