ಫೆ.9ರಂದು ಗಂಗಾಮತಸ್ಥರ ಸಮಾವೇಶ: ನಾಗರಾಜ
ಸಿಂಧನೂರು: ಎಲ್ಲ ರಂಗಗಳಲ್ಲಿ ಹಿಂದುಳಿದಿರುವ ಗಂಗಾಮತಸ್ಥ, ಕೋಲಿ, ಕಬ್ಬಲಿಗ ಸಮಾಜವನ್ನು ಎಸ್ಟಿಗೆ ಸೇರಿಸುವಂತೆ ಒತ್ತಾಯಿಸಿ ಫೆ.9ರಂದು ಯಾದಗಿರಿ ಜಿಲ್ಲೆಯ ಯಾನಾಗುಂದಿಯಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ಗಂಗಾಮತಸ್ಥ ಸಮಾಜದ ರಾಜ್ಯ ಉಪಾಧ್ಯಕ್ಷ ಎಸ್.ಪಿ. ನಾಗರಾಜ ವಕೀಲರು ಹೇಳಿದರು. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ವಿವಿಧ ಹೆಸರುಗಳಿಂದ ಗುರುತಿಸಲ್ಪಡುವ ಗಂಗಾಮತಸ್ಥರು 30 ಲಕ್ಷಕ್ಕೂ ಅಧಿಕ ಜನಸಂಖ್ಯೆಯಲ್ಲಿದ್ದಾರೆ. ಬುಡಕಟ್ಟು ಜನಾಂಗವಾದ ಗಂಗಾಮತ ಸಮಾಜವನ್ನು ಎಸ್ಟಿಗೆ ಸೇರಿಸುವಂತೆ ಅನೇಕ ಆಯೋಗಗಳು ಹೇಳಿವೆ. ಹೋರಾಟ ಮಾಡಿದರೂ ಬೇಡಿಕೆ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಫೆ.9ರಂದು ಜವಳಿ ಸಚಿವ ಬಾಬುರಾವ್ ಚಿಂಚನಸೂರು ನೇತೃತ್ವದಲ್ಲಿ ಯಾನಾಗುಂದಿಯಲ್ಲಿ ಸಮಾಜದ ಶಿವಶರಣೆ ಮಾತೆ ಮಾಣಿಕೇಶ್ವರಿ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು ಸಿಎಂಗೆ ಮನವಿ ಸಲ್ಲಿಸಲಾಗುತ್ತದೆ ಎಂದರು. ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್, ರಾಜ್ಯ ಸಚಿವ ಆಂಜನೇಯ ಅವರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.