ವಿವೇಕಾನಂದರ ಜಯಂತಿ; ಯುವ ಸಪ್ತಾಹಕ್ಕೆ ಚಾಲನೆ
ರಾಯಚೂರು: ನಗರದ ಪೊಲೀಸ್ ಕಾಲೋನಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಯುವ ಸಪ್ತಾಹವನ್ನು ಎನ್ನೆಸ್ಸೆಸ್ ಘಟಕದಿಂದ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಸಿ.ಟಿ. ಕಲ್ಲಯ್ಯ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸೈಯದ್ ಇಸ್ಮಾಯಿಲ್ ಸಮಾರಂಭದಲ್ಲಿ ಮಾತನಾಡಿ, ದೇಶದ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದರು. ಸಿರವಾರದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ಹಿರೇಮಠ ಮಾತನಾಡಿದರು. ಸಮಾರಂಭದಲ್ಲಿ ಎನ್ನೆಸ್ಸೆಸ್ ಘಟಕಾಧಿಕಾರಿ ಮಂಜುನಾಥ್, ಸಿದ್ದಲಿಂಗಯ್ಯ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು, ಶಿಬಿರಾರ್ಥಿಗಳಿದ್ದರು.
ಜಯಂತಿ ಆಚರಣೆಗೆ ನಿರ್ಲಕ್ಷ್ಯ; ಕ್ರಮಕ್ಕೆ ದಸಂಸ ಒತ್ತಾಯ
ರಾಯಚೂರು: ದೇವದುರ್ಗ ತಾಲೂಕಿನ ಪರಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆಗೆ ನಿರ್ಲಕ್ಷ್ಯ ತೋರಿದ್ದು ಸಂಬಂಧಿಸಿದ ಶಾಲೆಯ ಮುಖ್ಯಗುರು ಹಾಗೂ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ದೂರು ಸಲ್ಲಿಸಿರುವ ಸಂಘಟನೆಯು ಜ.13ರಂದು ಜಿಲ್ಲಾದ್ಯಂತ ಎಲ್ಲೆಡೆ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಸರ್ಕಾರದಿಂದ ಆಚರಿಸಲಾಯಿತು. ಆದರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಯಂತಿ ಆಚರಿಸದೇ ಶಿಕ್ಷಕರು ಅಸಡ್ಡೆ ತೋರಿದ್ದಾರೆಂದು ಆರೋಪಿಸಿದ್ದಾರೆ. ಜಯಂತಿ ಕಾರ್ಯಕ್ರಮ ಆಚರಿಸದ ಶಾಲೆಯ ಸಿಬ್ಬಂದಿ ಅಂದು ಶಾಲೆ ಮುಚ್ಚಿದ್ದು, ಶಾಲೆಯನ್ನು ಮುಚ್ಚಲು ಮೇಲಧಿಕಾರಿಗಳಿಗೆ ಅನುಮತಿ ಪಡೆದಿದ್ದಾರೆಯೇ ಎಂದು ಪ್ರಶ್ನಿಸಿರುವ ಸಂಘಟನೆಯು ಜಯಂತಿ ಕಾರ್ಯಕ್ರಮ ಆಯೋಜಿಸದೇ ಅಸಡ್ಡೆ ಮೆರೆದ ಶಾಲೆಯ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.