ಕೆಂಗಲ್; ದಲಿತ ಜನಾಂಗಕ್ಕೆ ಕಿರುಕುಳ ಆರೋಪ
ಸಿಂಧನೂರು: ತಾಲೂಕಿನ ಕೆಂಗಲ್ ಗ್ರಾಮದಲ್ಲಿ ಹಾದು ಹೋಗುವ ರಾರಾವಿ-ಬೇಲೂರು ರಾಜ್ಯ ಹೆದ್ದಾರಿ ಸಂಬಂಧಕ್ಕಾಗಿ ಆರೇಳು ತಿಂಗಳಿಂದ ತಹಸೀಲ್ದಾರ ವೆಂಕನಗೌಡ ಆರ್.ಪಾಟೀಲ್ ಲೋಕೋಪಯೋಗಿ ಇಲಾಖೆಯ ಎಇಇ ನಾಗರಾಜ, ಸಹಾಯಕ ಎಂಜಿನಿಯರ್ ರಾಮಸ್ವಾಮಿ ಸೇರಿದಂತೆ ಇತರ ಅಧಿಕಾರಿಗಳು ತಮಗೆ ತೊಂದರೆ ಕೊಡುತ್ತಿದ್ದಾರೆಂದು ಚನ್ನಪ್ಪ ಹರಿಜನ, ಚನ್ನಪ್ಪ ಅಂಬಮ್ಮ ಮತ್ತು ಈರಪ್ಪ ಆಲಮಪ್ಪ ಆಪಾದಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ಮೇಲೆ ಸುಳ್ಳಿನ ಆರೋಪ ಹೋರಿಸಿ, ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ ಎಂದು ಎತ್ತಂಗಡಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ದುರ್ಬಲವಾಗಿರುವ ನಮಗೆ ಮನೆಗಳನ್ನೇ ತೆರವುಗೊಳಿಸುವಂತೆ ಆದೇಶ ನೀಡಿದ್ದು, ಜೊತೆಗೆ ದೌರ್ಜನ್ಯ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳಿಗೆ ಸರಿಯಾದ ಶಿಕ್ಷೆ ನೀಡಿ, ನಮಗೆ ನ್ಯಾಯ ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.